

ಕೋಟಾ (ರಾಜಸ್ಥಾನ): ನೀಟ್-ಯುಜಿಗೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 21 ವರ್ಷದ ಯುವಕ ತನ್ನ ಕೊಠಡಿಯಲ್ಲಿ ಬುಧವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂಲಕ, ಕೋಟಾದಲ್ಲಿ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಾಗಿದೆ, 2023ರಿಂದ ಇಲ್ಲಿಯವರೆಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬರ್ಸಾನದ ನಿವಾಸಿಯಾದ ಪರಶುರಾಮ್ ಜಾತವ್ (21) ಮೃತ ವಿದ್ಯಾರ್ಥಿ. ಕೋಟಾದಲ್ಲಿ ನೀಟ್ ತರಬೇತಿ ಪಡೆಯುತ್ತಿದ್ದ ಅವರು, ಇಲ್ಲಿನ ಪೇಯಿಂಗ್ ಗೆಸ್ಟ್ಹೌಸ್ನಲ್ಲಿ ತಂಗಿದ್ದರು. ಬುಧವಾರ ಮಧ್ಯಾಹ್ನ 1.15 ರ ಸುಮಾರಿಗೆ ತನ್ನ ತಂದೆಯೊಂದಿಗೆ ಮಾತನಾಡಿ ಮನೆಗೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ನನ್ನ ಮಗನ ಸಾವಿಗೆ ನೀಟ್- ಯುಜಿ 2024ರ ಹಗರಣ ಕಾರಣ ಎಂದು ಮೃತ ವಿದ್ಯಾರ್ಥಿಯ ತಂದೆ ಖಚರ್ಮಾಲ್ ಆರೋಪಿಸಿದ್ದಾರೆ.
ಈ ವರ್ಷ ನಡೆದ ನೀಟ್ ಪರೀಕ್ಷೆಯ ಮೊದಲ ಫಲಿತಾಂಶದಲ್ಲಿ ಪರಶುರಾಮ್ 647 ಅಂಕಗಳನ್ನು ಪಡೆದಿದ್ದ. ಆದರೆ ಪರಿಷ್ಕೃತ ಫಲಿತಾಂಶದಲ್ಲಿ ಅಂಕಗಳು 247ಕ್ಕೆ ಇಳಿಕೆಯಾದವು. ಇದರಿಂದ ಮಗ ಖಿನ್ನತೆಗೆ ಒಳಗಾಗಿದ್ದ ಎಂದು ವಿದ್ಯಾರ್ಥಿಯ ತಂದೆ ಖಚರ್ಮಾಲ್ ಗಂಭೀರ ಆರೋಪ ಮಾಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಕುತಂತ್ರ ಮಾಡಿದ ನೀಟ್ ಪರೀಕ್ಷಾ ಏಜೆನ್ಸಿ ಮತ್ತು ಶ್ರೀಮಂತರು ನನ್ನ ಮಗನನ್ನು ಕೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.