

ಗುರುಪುರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಆಗಮಿಸಿದ್ದ ಮಹಿಳೆಯ ಬ್ಯಾಗ್ನಿಂದ 4.50 ಲಕ್ಷ ರೂ. ಮೌಲ್ಯದ 56 ಗ್ರಾಂ ತೂಕದ ಚಿನ್ನಾಭರಣ ಕದ್ದ ಆರೋಪದಲ್ಲಿ ವಿಮಾನ ನಿಲ್ದಾಣದ ಅಧಿಕೃತ ಕಂಪನಿಯೊಂದರಲ್ಲಿ ಲೋಡ್-ಅನ್ಲೋಡ್ ಕೆಲಸ ಮಾಡುತ್ತಿದ್ದ ನಾಲ್ವರು ಹಾಗೂ ಚಿನ್ನ ಖರೀದಿಸಿದ ವ್ಯಕ್ತಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಡಿಯಾ ಸ್ಯಾಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಂದಾವರ ಗ್ರಾಮದ ನಿವಾಸಿ ನಿತಿನ್, ಮೂಡುಪೆರಾರ ಗ್ರಾಮದ ನಿವಾಸಿ ಸದಾನಂದ, ರಾಜೇಶ್ ಮತ್ತು ಬಜ್ಪೆಯ ನಿವಾಸಿ ಪ್ರವೀಣ್ ಫರ್ನಾಂಡಿಸ್ ಎಂಬುವರನ್ನು ಮೊದಲಿಗೆ ಸಂಶಯದ ಮೇಲೆ ವಶಕ್ಕೆ ಪಡೆದು ವಿಸ್ತೃತ ವಿಚಾರಣೆ ನಡೆಸಿದಾಗ ಚಿನ್ನಾಭರಣ ಕಳುವು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮೂಡುಪೆರಾರದ ರವಿರಾಜ್ ಎಂಬಾತಗೆ ಕದ್ದ ಚಿನ್ನಾಭರಣ ಮಾರಾಟ ಮಾಡಿದ್ದರು. ವಿಚಾರಣೆ ಬಳಿಕ ಪೊಲೀಸರು ಆರೋಪಿಗಳಿಂದ ಸುಮಾರು 5 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ. ಮಹಿಳೆಯ ದೂರಿನಂತೆ ನಾಲ್ವರು ಆರೋಪಿಗಳ ವಿರುದ್ಧ ಹಾಗೂ ರವಿರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಜೇಶ್ವರಿ ಎಂಬುವರು ಮಂಗಳೂರಿನಲ್ಲಿ ನಡೆಯಲಿದ್ದ ಸಂಬಂಧಿಕರ ಮದುವೆಗೆಂದು ಆ.30ರಂದು ಬೆಂಗಳೂರಿನಿಂದ ಇಲ್ಲಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಆಗಮಿಸಿದ್ದರು. ನಿಲ್ದಾಣದಿಂದ ಹೊರಗೆ ಬಂದ ಅವರು ಲಗೇಜ್ ಟ್ರಾಲಿ ಗಮನಿಸಿದಾಗ ಬ್ಯಾಗ್ನ ಲಾಕ್ ತೆರೆದಿರುವುದು ಕಂಡು ಬಂತು. ಪರಿಶೀಲಿಸಿದಾಗ ಬ್ಯಾಗ್ನಕಲ್ಲಿದ್ದ ಬೆಲೆಬಾಳುವ ಚಿನ್ನದ ನೆಕ್ಲೇಸ್ ಕಾಣೆಯಾಗಿತ್ತು. ಈ ಬಗ್ಗೆ ಆಕೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಕಳ್ಳತನ ಗ್ಯಾಂಗ್!: ವಿಚಾರಣೆ ವೇಳೆ 2025ರ ಜನವರಿಯಲ್ಲಿ ಈ ಗ್ಯಾಂಗ್ ಸದಸ್ಯರು ವಿಮಾನ ಪ್ರಯಾಣಿಕ ಮನೋಹರ ಶೆಟ್ಟಿ ಎಂಬುವರ ಬ್ಯಾಗ್ನಿಂದ 2 ಲಕ್ಷ ರೂ. ನಗದು ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳಿಂದ ಈ ಹಣ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಜನವರಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿತ್ತು. ಬಂಧಿತ ನಾಲ್ವರು ಆರೋಪಿಗಳು ಏರ್ ಇಂಡಿಯಾ ಸ್ಯಾಟ್ಸ್ ಕಂಪನಿಯಲ್ಲಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳುವ ಬಗ್ಗೆ ಬಜ್ಪೆ ವೃತ್ತ ನಿರೀಕ್ಷಕ ಸಂದೀಪ್ ಅವರ ನೇತೃತ್ವದ ಪೊಲೀಸ ತಂಡ ಸಿದ್ಧತೆ ನಡೆಸುತ್ತಿದೆ.
ಪ್ರಯಾಣಿಕರೇ ಎಚ್ಚರಿಕೆ!: ವಿಮಾನ ಪ್ರಯಾಣಿಕರು ಬೆಲೆ ಬಾಳುವ ವಸ್ತುಗಳಾದ ಚಿನ್ನ, ನಗದನ್ನು ಬ್ಯಾಗೇಜ್ನಲ್ಲಿ ಕಳುಹಿಸುವಾಗ ಸದ್ರಿ ಆರೋಪಿಗಳು ಬ್ಯಾಗ್ ತೆರೆದಿದ್ದಲ್ಲಿ ಅವುಗಳನ್ನು ಹುಡುಕಿ ಕಳ್ಳತನ ಮಾಡುವುದು ರೂಢಿಯಾಗಿಸಿದ್ದಾರೆ. ಇನ್ನು ಕೆಲವೊಮ್ಮೆ ಬ್ಯಾಗ್ ಲಾಕ್ನ ಸುಲಭ ಪಾಸ್ವರ್ಡ್ ಸಂಖ್ಯೆಗಳಿದ್ದಲ್ಲಿ ಅವುಗಳನ್ನು ತೆರೆದು ಕಳ್ಳತನ ಮಾಡುತ್ತಿದ್ದರು. ಆದ್ದರಿಂದ ಪ್ರಯಾಣಿಕರು ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.