

ನವದೆಹಲಿ: ಲಾಕ್ಡೌನ್ 4.0 ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ. ಹಲವು ಸಡಿಲಿಕೆಗಳಾಗಲಿವೆ, ಸಾರ್ವಜನಿಕ ಸಾರಿಗೆಗಳಿಗೆ ಅವಕಾಶ ಸಿಗಲಿದೆ, ರೆಸ್ಟೋರೆಂಟ್, ಶಾಪಿಂಗ್ ಮಾಲ್ಗಳು ಮತ್ತೆ ತೆರೆಯಲಿವೆ ಎಂಬಿತ್ಯಾದಿ ಚರ್ಚೆ, ಆಶಯಗಳ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇಂದು ಹೊಸ ಆದೇಶವನ್ನು ಪ್ರಕಟಿಸಿದೆ.
ಸದ್ಯ ಇರುವ ಲಾಕ್ಡೌನ್ ಅವಧಿಯನ್ನು ಇನ್ನೂ ಎರಡುವಾರಗಳ ಕಾಲ ಅಂದರೆ ಮೇ 31ರವರೆಗೆ ವಿಸ್ತರಣೆ ಮಾಡಿ ಎನ್ಡಿಎಂಎ ಆದೇಶ ನೀಡಿದೆ.
ಉನ್ನತ ವಿಪತ್ತು ನಿರ್ವಹಣಾ ಸಂಸ್ಥೆಯಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗೃಹ ಸಚಿವಾಲಯಕ್ಕೆ ನೀಡಿದ ಶಿಫಾರಸುಗಳ ಅನ್ವಯ ಈ ಆದೇಶ ಪ್ರಕಟವಾಗಿದೆ. ದೇಶದಲ್ಲಿ ಕೊವಿಡ್-19 ತಡೆಗಟ್ಟಲು ಇನ್ನೂ ಹೆಚ್ಚಿನ ನಿಯಂತ್ರಣಾ ಕ್ರಮಗಳು ಅಗತ್ಯ ಇರುವ ಕಾರಣ ಲಾಕ್ಡೌನ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. (ಏಜೆನ್ಸೀಸ್)