"ಗಂಡುಗಲಿ ಮದಕರಿ ನಾಯಕ"ನಿಗೆ ಜೊತೆಯಾಗಲಿದ್ದಾರಾ ದಕ್ಷಿಣ ಭಾರತದ ಈ ಪ್ರಖ್ಯಾತ ನಟಿ?

Gandugali Madakari nayaka
Published on

ಚೆನ್ನೈ: ಚಾಲೆಂಜಿಗ್​ ಸ್ಟಾರ್​ ದರ್ಶನ್ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ "ಗಂಡುಗಲಿ ಮದಕರಿ ನಾಯಕ" ಚಿತ್ರದ ನಾಯಕಿಯಾಗಿ ದಕ್ಷಿಣ ಭಾರತ ಚಿತ್ರರಂಗದ ಪ್ರಖ್ಯಾತ ನಟಿಯ ಹೆಸರು ಕೇಳಿ ಬರುತ್ತಿದೆ.

ಹೌದು, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿರುವ ನಯನತಾರಾ ಮೊದಲ ಬಾರಿಗೆ ದರ್ಶನ್​ ಜತೆ ಡುಯೆಟ್​ ಆಡಲಿದ್ದಾರೆ ಎನ್ನಲಾಗಿದೆ. ಆದರೆ, ಚಿತ್ರತಂಡ ನಾಯಕಿಯ ಬಗ್ಗೆ ಯಾವುದೇ ಸುಳಿವನ್ನು ಈವರೆಗೂ ನೀಡಿಲ್ಲ. ಆದರೆ, ನಯನತಾರಾ ಹೆಸರು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಈಗಾಗಲೇ ಮಾತುಕತೆ ನಡೆದಿದೆ ಎನ್ನಲಾಗಿದ್ದು, ಸಹಿಯೊಂದೆ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ನಯನತಾರಾ ಬಳಿ ಸಾಕಷ್ಟು ಚಿತ್ರಗಳಿರುವುದರಿಂದ ಸಮಯದ ಹೊಂದಾಣಿಕೆ ನೋಡಿಕೊಂಡು ಒಪ್ಪಿಗೆ ನೀಡಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ ನಯನತಾರಾ ಅವರಿಗೆ ಇದೇ ಮೊದಲ ಕನ್ನಡ ಸಿನಿಮಾವಲ್ಲ. 2010ರಲ್ಲಿ ತೆರೆಕಂಡು ಸೂಪರ್​ ಹಿಟ್​ ಆದ ನಟ ಉಪೇಂದ್ರ ನಿರ್ದೇಶಿಸಿ ನಟಿಸಿದ ಸೂಪರ್​ ಚಿತ್ರದಲ್ಲಿ ಉಪ್ಪಿಗೆ ನಾಯಕಿಯಾಗಿದ್ದರು. ಆದರೆ, ಅಂದಿನಿಂದ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ನಯನಾ ಮತ್ತೆ ಬಣ್ಣ ಹಚ್ಚಿರಲಿಲ್ಲ. ಇದೀಗ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ನಯನಾ ಹೆಸರು ಚಾಲ್ತಿಯಲ್ಲಿರುವುದರಿಂದ ಮತ್ತೊಮ್ಮೆ ಕನ್ನಡ ಸಿನಿರಸಿಕರನ್ನು ನಯನಾ ರಂಜಿಸಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನು ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರವನ್ನು ರಾಜೇಂದ್ರ ಸಿಂಗ್​ ಬಾಬು ಅವರು ನಿರ್ದೇಶನ ಮಾಡುತ್ತಿದ್ದು, ರಾಕ್​ಲೈನ್ ವೆಂಕಟೇಶ್​ ಬಂಡವಾಳ ಹೂಡಿದ್ದಾರೆ. ಹಿರಿಯ ನಟರಾದ ದೊಡ್ಡಣ, ಶ್ರೀನಿವಾಸ ಮೂರ್ತಿ ಸೇರಿದಂತೆ ಬಹುತಾರಾ ಬಳಗವೇ ಚಿತ್ರತಂಡದಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net