

ಚೆನ್ನೈ: ಬಹುಭಾಷಾ ಕಲಾವಿದೆಯಾಗಿ ಜನಪ್ರಿಯರಾಗಿರುವ ಲೇಡಿ ಸೂಪರ್ಸ್ಟಾರ್ ನಯನ್ತಾರಾ ಇತ್ತೀಚೆಗೆ ತಮಿಳುನಾಡಿನ ರಾಜಧಾನಿಯ ಪಾಶ್ ಬಡಾವಣೆಯೊಂದರಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಈ ಮನೆಗೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿರುವ ನಟಿಯು ತಮ್ಮ ಫಿಯಾನ್ಸಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ವೈವಾಹಿಕ ಜೀವನವನ್ನೂ ಆರಂಭಿಸಲಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ.
ಮಾಜಿ ಸಿಎಂ ಜಯಲಲಿತಾ, ತಮಿಳು ಸೂಪರ್ಸ್ಟಾರ್ ರಜನೀಕಾಂತ್ ಮತ್ತಿತರರ ಗಣ್ಯರ ಬಂಗಲೆಗಳಿರುವ ಚೆನ್ನೈನ ಪೋಯೆಸ್ ಗಾರ್ಡನ್ ಪ್ರದೇಶದಲ್ಲಿ ನಯನ್, ನಾಲ್ಕು ಬೆಡ್ರೂಂ ಮನೆ ಖರೀದಿಸಿದ್ದಾರೆ. ಈ ದುಬಾರಿ ಮನೆಗೆ ತಮ್ಮ ಫಿಯಾನ್ಸಿ ಶಿವನ್ ಜೊತೆ ವಾಸಕ್ಕಾಗಿ ತೆರಳಲಿದ್ದಾರೆ ಎಂದು ವರದಿಗಳು ಹೇಳಿವೆ. ಕಳೆದ ದಿನಗಳಲ್ಲಿ 37 ವರ್ಷ ತುಂಬಿದ ನಟಿಯು ಈ ವರ್ಷದ ಮೊದಲಲ್ಲಿ ಸದ್ದಿಲ್ಲದೆ ಶಿವನ್ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ಬಗ್ಗೆ ಮಾತನಾಡಿದ ಅವರು ತಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳಿಗೆ ತಿಳಿಸುವುದಾಗಿ ಹೇಳಿದ್ದರು ಎನ್ನಲಾಗಿದೆ.
ಶಿವನ್ ನಿರ್ದೇಶನದ 'ಕಾದುವಾಕುಲ ರೆಂಡು ಕಾದಲ್' ಚಿತ್ರದಲ್ಲಿ, ಶಾರುಖ್ ಖಾನ್ರ ಲಯನ್ ಮತ್ತು ಅಶ್ವಿನ್ ಶರವಣನ್ರ ಕನೆಕ್ಟ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಯನ್ತಾರಾ ತಮ್ಮ ಹಾಲಿ ಸಿನಿ ಪ್ರಾಜೆಕ್ಟ್ಗಳು ಮುಗಿದ ನಂತರ ಹಸೆಮಣೆ ಏರಲಿದ್ದಾರೆ ಎಂದು ಭಾವಿಸಲಾಗಿದೆ. ಆ ವಿಶೇಷ ಕ್ಷಣಗಳೂ ಹೊಸ ಮನೆಯ ಗೃಹಪ್ರವೇಶದೊಂದಿಗೇ ಬರಲಿವೆಯೇ ಎಂದು ಕಾದುನೋಡಬೇಕು. (ಏಜೆನ್ಸೀಸ್)