

ಬಂಟ್ವಾಳ: ಧಾರ್ಮಿಕ ಆಚರಣೆ ಮೂಲ ಉದ್ದೇಶವಾದರೂ ಸಾಮಾಜಿಕ ಕಾಳಜಿ ಶ್ರದ್ಧಾಕೇಂದ್ರದ ಆಶಯವಾಗಬೇಕು. ಅನ್ನದಾನ, ವಿದ್ಯಾದಾನಾದಿ ಸಮಾಜಮುಖಿ ಕೆಲಸಗಳು ಪ್ರಸಾದ ರೂಪವಾಗಿ ಫಲಾನುಭವಿಯ ಬಳಿ ಸೇರಬೇಕು. ಕೊಡುವ ಅಹಂಭಾವ ಹಾಗೂ ಪಡೆದ ದೀನಭಾವವೂ ಇರದಂತೆ ನಡೆಯುವುದೇ ಧರ್ಮದ ಆಶಯವಾಗಬೇಕು ಎಂದು ಮಂಗಳೂರು ಅರಕೆರೆಬೈಲು ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರ ಅಧ್ಯಕ್ಷ ಸೀತಾರಾಮ ಎ. ಅಭಿಪ್ರಾಯಪಟ್ಟರು.
ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತಾಡಿದರು.
ಮುಖ್ಯ ಅತಿಥಿ ನಿವೃತ್ತ ಎ.ಆರ್.ಟಿ.ಒ. ವಿಶ್ವನಾಥ ನಾಯ್ಕ ಭಾಗವಹಿಸಿದ್ದರು. ಸಂಚಾಲಕ ನಾರಾಯಣ ನಾಯ್ಕ ಪೆರ್ನೆ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ರಾಮಲ್‌ಕಟ್ಟೆ ಎಳೆಯರ ಬಳಗ ಅಧ್ಯಕ್ಷ ಪೂಜೇಶ್ ಆಚಾರ್ಯ, ಜ್ಯೋತಿಷಿ ಅನಿಲ್ ಪಂಡಿತ್ ಅತಿಥಿಯಾಗಿ ಭಾಗವಹಿಸಿದರು.
ಸಾಧಕ ವಿದ್ಯಾರ್ಥಿಗಳಾದ ವೈಷ್ಣವಿ, ಲಹರಿ ಎಸ್. ಮತ್ತು ದೇವಿಕಾ ಆರ್., ಕಾವ್ಯಾ, ಸುಶಾನ್, ಮುಹಮ್ಮದ್ ಮುಬಶಿರ್, ಶಿಫಾನಾ, ಕುಶಿ ಹಾಗೂ ಎಂ.ಎ. ಹಿಂದಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ರಶ್ಮಿತಾ ಪೆರಿಯೋಡಿ ಅವರನ್ನು ಸನ್ಮಾನಿಸಲಾಯಿತು.
ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಕುಮಾರ್ ರೆಂಜೋಡಿ ಸ್ವಾಗತಿಸಿದರು. ಟಿ. ತಾರಾನಾಥ ಕೊಟ್ಟಾರಿ ಪ್ರಸ್ತಾವಿಸಿದರು. ಉದಯ ಕುಮಾರ್ ಜ್ಯೋತಿಗುಡ್ಡೆ ನಿರೂಪಿಸಿದರು. ವೇಣುಗೋಪಾಲ್ ಜ್ಯೋತಿಗುಡ್ಡೆ ವಂದಿಸಿದರು.
ಯಕ್ಷಜ್ಯೋತಿ ಜ್ಯೋತಿಗುಡ್ಡೆ ಸಂಯೋಜನೆಯಲ್ಲಿ ಬಂಟ್ವಾಳ ದರ್ಬೆ ಯಕ್ಷ ಕಾವ್ಯ ತರಂಗಿಣಿ ದಿ. ಚಂದಪ್ಪ ಪೂಜಾರಿ ಪ್ರತಿಷ್ಠಾನದಿಂದ ಕೃಷ್ಣ ಲೀಲೆ-ಕಂಸ ವಧೆ ಯಕ್ಷಗಾನ ಬಯಲಾಟ ಹಾಗೂ ಅಮ್ಮುಂಜೆಕಲಾಯಿ ಶ್ರೀ ಅಂಬಿಕಾ ಯಕ್ಷಗಾನ ಕಲಾ ಮಂಡಳಿಯಿಂದ ಕರ್ಣಾರ್ಜುನಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.