ಉಡುಪಿ ಜಯದುರ್ಗಾ ಪರಮೇಶ್ವರಿ ದೇಗುಲದಲ್ಲಿ ನವರಾತ್ರಿ ಸಂಭ್ರಮ

Navarathri
Published on

ಭಕ್ತರಿಂದ ನಾಲ್ಕು ಚಂಡಿಕಾ ಯಾಗ ಸೇವೆ

ರವಿಕೆ ಕಣ, ಬಳೆ, ಫಲ ಸಹಿತ ಅನ್ನ ಸಂತರ್ಪಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲೆಯ ವಿವಿಧ ದೇವಿ ಮಂದಿರಗಳಲ್ಲಿ ನವರಾತ್ರಿ ಆಚರಣೆ ಸಂಭ್ರಮದಿಂದ ಸಾಗಿದೆ. ಉಡುಪಿ ಕನ್ನರ್ಪಾಡಿಯಲ್ಲಿರುವ ಜಯದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ (ಸೆ.25) ಶರನ್ನವರಾತ್ರಿ ನಿಮಿತ್ತ ಭಕ್ತರಿಂದ ಒಟ್ಟು ನಾಲ್ಕು ಚಂಡಿಕಾಯಾಗ ಸೇವೆ ನಡೆಯಿತು.

ದೇವಿಯನ್ನು ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕರಿಸಿ ಮಹಾಪೂಜೆ ಹಾಗೂ ವೇದಮೂರ್ತಿ ಶ್ರೀಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

ಭಕ್ತರಿಂದ ವಿವಿಧ ಸೇವೆ

Navarathri 2
ನವರಾತ್ರಿ ಹಿನ್ನೆಲೆಯಲ್ಲಿ ಭಕ್ತರು ದೇವಿಗೆ ವಿವಿಧ ಸೇವೆ ಸಮರ್ಪಿಸಿದರು. ದೇವಿಗೆ ಅಲಂಕರಿಸಲು ರೇಷ್ಮೆ ಸೀರೆ ಸೇವೆ, ಕುಂಕುಮಾರ್ಚನೆ, ಹಾಲು ಪಾಯಸ, ಪಂಚಾಮೃತ, ಹರಿವಾಣ ನೈವೇದ್ಯ, ಸಪ್ತಶತಿ ಪಾರಾಯಣ, ಗುಡಾನ್ನ, ಕಲ್ಪೋಕ್ತ ಪೂಜಾ ಸೇವೆ ಸೇರಿದಂತೆ ಮನೋಕಾಮನೆ ಈಡೇರಿಸುವಂತೆ ವಿವಿಧ ಪೂಜೆ ಸಲ್ಲಿಸಿದರು.

ಭಕ್ತರಿಗೆ ಅನ್ನ ಸಂತರ್ಪಣೆ

ದೇಗುಲಕ್ಕೆ ಆಗಮಿಸುವ ಭಕ್ತರಿಗೆ ನಿತ್ಯವೂ ರವಿಕೆ ಕಣ, ಬಳೆ, ಫಲ ಸಹಿತ ಪ್ರಸಾದ ವಿತರಿಸಲಾಗುತ್ತಿದೆ. ಸರತಿ ಸಾಲಿನಲ್ಲಿ ದೇವಿ ದರ್ಶನ ಮಾಡಿದ ಬಳಿಕ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ಗುರುವಾರ ರಾತ್ರಿ ಕಲ್ಪೋಕ್ತ ಪೂಜೆ, ರಾತ್ರಿಯ ಮಹಾಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ ಹಾಗೂ ರಂಗ ಪೂಜೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net