ದುಷ್ಟಶಕ್ತಿ ನಾಶಕ್ಕೆ ನವರಾತ್ರಿ ಆಚರಣೆ

Published on

ಮಂಗಳೂರು: ಪಿತೃ ಪಕ್ಷ ಮುಗಿಯುತ್ತಿದ್ದಂತೆ ನವರಾತ್ರಿ ಮೂಲಕ ನವದುರ್ಗೆಯ ಆರಾಧನೆ ಆರಂಭವಾಗುತ್ತದೆ. ನವರಾತ್ರಿ ಅನ್ನುವಂತಹುದು ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ಸಂಹಾರಗೈದ ಮಹಾನ್ ದುರ್ಗಾ ಶಕ್ತಿಯ ಆರಾಧನೆಯಾಗಿದೆ. ಈ ಮೂಲಕ ನಮ್ಮೊಳಗಿರುವ ದುಷ್ಟಶಕ್ತಿಗಳನ್ನು ನಾಶ ಮಾಡುವ ಮೂಲಕ ನವರಾತ್ರಿಯನ್ನು ಆಚರಿಸೋಣ ಎಂದು ಆಧ್ಯಾತ್ಮ ಸಾಧಕಿ, ಬರಹಗಾರ್ತಿ ಡಾ.ವೀಣಾ ಬನ್ನಂಜೆ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು, ವಿಶ್ವಮಹಿಳಾ ಬಿಲ್ಲವ ಸಂಘ ಕುದ್ರೋಳಿ, ಮಂಗಳೂರು ತಾಲೂಕು ಬಿಲ್ಲವ ಸಂಘ ಸಂಯುಕ್ತಾಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ‘ನವರಾತ್ರಿ ನವದುರ್ಗೆಯರು’ ವಿಷಯದಲ್ಲಿ ಉಪನ್ಯಾಸ ನೀಡಿದರು.

ಪುರುಷ ಪರಂಪರೆಯಲ್ಲಿ ಆರಾಧನೆಯನ್ನು ನೋಡಲಾಗುತ್ತಿದೆಯಾ ಅಷ್ಟೇ ಭಕ್ತಿಯಿಂದ ಮಾತೃ ಪರಂಪರೆಯನ್ನು ಗೌರವಿಸಲಾಗುತ್ತಿದೆ. ಬ್ರಹ್ಮನಂತೆ ಸರಸ್ವತಿಗೆ, ವಿಷ್ಣುವಿನಂತೆ ಲಕ್ಷ್ಮಿಗೆ, ಈಶ್ವರನಂತೆ ಪಾರ್ವತಿಗೆ ಪ್ರಾಧಾನ್ಯತೆ ಇದೆ. ದಶಾವತಾರದಲ್ಲಿ ಪುರುಷ ಪ್ರಧಾನ ಆರಾಧನೆ ನಡೆದರೆ ನವರಾತ್ರಿಯ 9 ದಿನಗಳಲ್ಲಿ ನವದುರ್ಗೆಯನ್ನು ನಾನಾ ರೂಪಗಳಲ್ಲಿ ಆರಾಧನೆ ನಡೆಯುತ್ತಿದೆ. ಈ ನವರೂಪಕ್ಕೆ ಒಂದೊಂದು ವಿಭಿನ್ನತೆ, ವೈಶಿಷ್ಟ್ಯತೆಯಿದೆ. ನಮ್ಮ ಭಕ್ತಿಯ ವಿಸ್ತಾರ ಅದು ತಾಯ್ತನಕ್ಕೆ ಕೊಡುವ ಗೌರವವಾಗಿದೆ ಎಂದು ಅವರು ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಕೋಶಾಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಕೃತಿನ್ ಡಿ. ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಹರೀಶ್ ಕುಮಾರ್, ಗೌರವಿ ರಾಜಶೇಖರ್, ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ, ಮಾಜಿ ಮೇಯರ್ ವಿಜಯ ಅರುಣ್, ಗೋಪಾಲಕೃಷ್ಣ ತಂತ್ರಿ, ಕಾರ್ಯಕ್ರಮ ಸಂಯೋಜಕರಾದ ಚರಣ್ ಕೆ. ಬೆಳ್ತಗಂಡಿ ಉಪಸ್ಥಿತರಿದ್ದರು.

-------------

ಮಕ್ಕಳಿಗೆ ಉತ್ತಮ ಸಂಸ್ಕಾರ ಅಗತ್ಯ

ಕುಟುಂಬದಲ್ಲಿ ತಾಯಿಯಾದವಳು ತನ್ನ ಕಾರ್ಯ ಒತ್ತಡದ ಮಧ್ಯೆ ಮನೆಯ ಜವಾಬ್ದಾರಿ, ಮಕ್ಕಳ ಜವಾಬ್ದಾರಿ, ಸಾಮಾಜಿಕ ಜವಾಬ್ದಾರಿ ಸೇರಿದಂತೆ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುವವಳು. ತಂದೆಯಾದವನು ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ ಸಮಯಕ್ಕೆ ಸಂದರ್ಭಕ್ಕೆ ತಕ್ಕಂತೆ ಎಲ್ಲರಿಗೂ ಯಜಮಾನ ಸ್ಥಾನದಲ್ಲಿ ನಿಂತು ಪತ್ನಿ, ಮಕ್ಕಳು, ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಾನೆ. ಇದು ನಮ್ಮ ಸುಂದರ ಕುಟುಂಬ ಬದುಕಿನ ವೈಶಿಷ್ಟ್ಯತೆ. ಇದನ್ನು ಇಂದಿನ ಸಮಾಜ ಅರಿಯದೆ ಹೋದರೆ ಮುಂದೆ ಆಪತ್ತು ತಪ್ಪಿದ್ದಲ್ಲ. ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ಬೆಳೆಸಿ ಅವರನ್ನು ಈ ಸಮಾಜದ ಆಸ್ತಿಯನ್ನಾಗಿಸಿ ಎಂದು ಡಾ.ವೀಣಾ ಬನ್ನಂಜೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net