

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಾಸರಗೋಡು ಜಿಲ್ಲೆಯ ನಾನಾ ಶಕ್ತಿ ಕೇಂದ್ರಗಳಲ್ಲಿ ನವರಾತ್ರಿ ಮಹೋತ್ಸವಕ್ಕೆ ಸೋಮವಾರ ಸಂಭ್ರಮದ ಚಾಲನೆ ದೊರಕಿತು.
ಕಾಸರಗೋಡು ಕೊರಕ್ಕೋಡು ಶ್ರೀ ಆರ್ಯಕಾರ್ತ್ಯಾಯಿನಿ ದೇವಿ ದೇವಸ್ಥಾನದಲ್ಲಿ ಬೆಳಗ್ಗೆ ಭಂಡಾರದ ಮನೆಯಿಂದ ಶ್ರೀದೇವರ ಭಂಡಾರ ದೇವಾಲಯಕ್ಕೆ ತಂದು ದೇವಸ್ಥಾನ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಶುದ್ಧಿ ಕಲಶ, ಚಂಡಿಕಾ ಹೋಮ, ಮಹಾಪೂಜೆ ನಡೆಯಿತು.
ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಶ್ರೀ ಚಂಡಿಕಾ ಹೋಮ, ತುಲಾಭಾರ ಸೇವೆ, ದೇವರಿಗೆ ವಿಶೇಷ ಪೂಜೆ ನೆರವೇರಿತು. ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ, ಮಾಯಿಪ್ಪಾಡಿ ಪುರೋಹಿತ ಮಾಧವ ಆಚಾರ್ಯ ನೇತೃತ್ವದಲ್ಲಿ ಶರನ್ನವರಾತ್ರಿ ಮಹೋತ್ಸವ ಸೋಮವಾರ ಆರಂಭಗೊಂಡಿತು.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಾಸರಗೋಡು ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ, ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಮಧೂರು ಶ್ರೀ ಕಾಳಿಕಾಂಬಾ ಮಠ, ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನ, ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.