ಸ್ವಉದ್ಯೋಗದಲ್ಲಿ ಯುವ ಹುಮ್ಮಸ್ಸು: ಇಂದು ಸ್ವಾಮಿ ವಿವೇಕಾನಂದ ಜಯಂತಿ

Swami Vivekananda 2
Published on
ಉದ್ಯೋಗ ಕೇಳುವ ಬದಲು ಉದ್ಯೋಗ ನೀಡುವಂತವರಾಗಿ ಎಂಬುದು ಯುವಜನರಿಗೆ ಅನೇಕ ಸಾಧಕರ ಕಿವಿಮಾತು. ಈ ಸಾಧನೆ ಹೇಳುವಷ್ಟು ಸುಲಭದ್ದಲ್ಲ. ಆದರೂ, ಕೃಷಿ, ವ್ಯಾಪಾರ, ಜವಳಿ ಉದ್ಯಮ ಮತ್ತು ಇತರೆ ವಿಶಿಷ್ಟ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಅನೇಕರು ಈ ಭಿನ್ನ ಹಾದಿಯನ್ನು ಹಿಡಿಯುತ್ತಾರೆ. ಅಂಥವರ ಪೈಕಿ ರಾಜ್ಯದ ಆಯ್ದ ಯುವಜನರ ಸಾಧನೆಯ ಕಿರು ವಿವರವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

ಡಾ. ವಿಜಯ ಸಂಕೇಶ್ವರ ಅವರೇ ಪ್ರೇರಣೆ

ರೈತರ ಹೊಲಗಳಿಗೆ ಹನಿ ನೀರಾವರಿ ಮೂಲಸೌಕರ್ಯ ಸೌಲಭ್ಯ ಕಲ್ಪಿಸಲು ನೆರವಾಗುವ ಉದ್ಯಮ ಕಲ್ಲೋಳಿಯ ಸಂದೀಪ ಆಡಿನವರ ಅವರದ್ದು. ಸ್ವಗ್ರಾಮದಲ್ಲಿ ‘ಸಂದೀಪ್ ಎಂಟರ್​ಪ್ರೖೆಸಸ್’ ಎಂಬ ಉದ್ಯಮವನ್ನು ಒಂಬತ್ತು ವರ್ಷ ಹಿಂದೆ ಆರಂಭಿಸಿದರು. 2011ರಿಂದ ಇಲ್ಲಿಯವರೆಗೆ 2,000ಕ್ಕೂ ಅಧಿಕ ರೈತರ ಹೊಲಗಳಿಗೆ ಹನಿ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ಹನಿ ನೀರಾವರಿ ಮಾಡಿಕೊಳ್ಳಲು ಸರ್ಕಾರದಿಂದ ರೈತರಿಗೆ 5 ಎಕರೆವರೆಗೆ ಶೇ. 90ರಷ್ಟು ಸಬ್ಸಿಡಿ ದೊರೆಯುತ್ತದೆ. ಸಂದೀಪ ಅವರು ರೈತರ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಯೋಜನೆ ಸಾಕಾರಗೊಳಿಸುತ್ತಿದ್ದಾರೆ. ಸರ್ಕಾರದ ಹಣ ಬರುವುದಕ್ಕೂ ಮುನ್ನ ಸಂದೀಪ ಅವರು ತಮ್ಮ ಕೈಯಾರೆ ಹಣ ವಿನಿಯೋಗಿಸಿ, ಹನಿ ನೀರಾವರಿ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಹನಿ ನೀರಾವರಿಗೆ ಬೇಕಾದ ಸಾಮಗ್ರಿಗಳನ್ನು ಬೆಂಗಳೂರು ಮತ್ತು ಮುಂಬೈನ ಕಿಸಾನ್ ಮೋಲ್ಡಿಂಗ್ಸ್ ಲಿಮಿಟೆಡ್​ನಿಂದ ತರಿಸಿಕೊಂಡು ರೈತರಿಗೆ ನೆರವಾಗುತ್ತಿದ್ದಾರೆ. ‘ಬಿಎ ಪದವಿ ಮುಗಿಸಿದ ಬಳಿಕ ಸ್ವ-ಉದ್ಯೋಗ ಮಾಡಬೇಕೆಂಬ ಛಲ ಇತ್ತು. ಗದಗದಲ್ಲಿ ‘ಹೆಡ್ ಹೆಲ್ಡ್ ಹೈ’ ಸಂಸ್ಥೆಯಲ್ಲಿ ಆರು ತಿಂಗಳ ಸ್ವ ಉದ್ಯೋಗ ತರಬೇತಿ ಪಡೆದೆ. ಅಲ್ಲಿಗೆ ಅತಿಥಿಗಳಾಗಿ ಆಗಮಿಸಿದ್ದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದೆ. ಅಂದು ಅವರು ಹೇಳಿದ ಪ್ರೇರಣಾ ಮಾತುಗಳು ನನ್ನ ಬೆಳವಣಿಗೆಗೆ ಕಾರಣವಾದವು’ ಎಂದು ಸಂದೀಪ ಸಂತಸದಿಂದ ಹೇಳಿಕೊಳ್ಳುತ್ತಾರೆ. ಸಂದೀಪ ಅವರು ಮುಂದಿನ 6 ತಿಂಗಳಲ್ಲಿ ಬೆಲ್ಲದ ಗಾಣ ಉದ್ಯೋಗ ಆರಂಭಿಸುವ ಇರಾದೆ ಹೊಂದಿದ್ದಾರೆ. ಈ ಮೂಲಕ ಕನಿಷ್ಠ 25 ಜನಕ್ಕೆ ಉದ್ಯೋಗ ನೀಡುವ ಯೋಜನೆ ಹಾಕಿಕೊಂಡಿದ್ದಾರೆ.

ಕುಲಕಸುಬು ದಾರಿದೀಪ

ಯಾವುದೇ ಕೆಲಸ ಮೇಲಲ್ಲ-ಕೀಳಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ-ನಿಷ್ಠೆ ಇದ್ದರೆ ನಾವು ಮಾಡುವ ಕೆಲಸ ನಮಗೆ ದಾರಿದೀಪ ಎನ್ನುವುದಕ್ಕೆ ರಾಯಚೂರು ತಾಲೂಕು ಕಮಲಾಪುರ ಗ್ರಾಮದ ಉಮೇಶ ನಿದರ್ಶನವಾಗಿದ್ದಾರೆ. ‘ಆರ್ಥಿಕ ಸಂಕಷ್ಟದಿಂದ ಎಸ್ಸೆಸ್ಸೆಲ್ಸಿಗೆ ಓದು ನಿಲ್ಲಿಸಿದೆ. ಗ್ರಾಮದಲ್ಲಿ ಬೇರೊಬ್ಬರ ಸಲೂನ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಪ್ರತಿ ತಿಂಗಳು ಏಳು ಸಾವಿರ ರೂ. ವೇತನ ಬರುತ್ತಿತ್ತು. ನಮ್ಮದು ರೈತ ಕುಟುಂಬ. ನಾನು ಹಿರಿಯ ಮಗ. ತಂದೆ, ತಾಯಿ ಮತ್ತು ಇಬ್ಬರು ಸಹೋದರರಿದ್ದಾರೆ. ಕುಟುಂಬಕ್ಕೆ ಆಧಾರವಾಗಬೇಕು ಎನ್ನುವ ಆಸೆಯೊಂದಿಗೆ ಬಡ್ಡಿಗೆ ಸಾಲ ತಂದು ಗ್ರಾಮದ ಹತ್ತಿರದ ಕಸ್ಬೆ ಕ್ಯಾಂಪ್​ನಲ್ಲಿ ಸಣ್ಣ ಸಲೂನ್ ಶಾಪ್ ತೆರೆದೆ. ಹೀಗೆ ಧೈರ್ಯ ಮಾಡಿ ಸ್ವ ಉದ್ಯೋಗ ಆರಂಭಿಸಿ ಒಂದು ತಿಂಗಳಾಗಿದೆ. ಮನೆ ಖರ್ಚು ವೆಚ್ಚ ಮತ್ತು ತಮ್ಮಂದಿರ ಓದಿಗೂ ಅನುಕೂಲವಾಗುವ ರೀತಿಯಲ್ಲಿ ಆದಾಯ ಸಿಗುವ ನಿರೀಕ್ಷೆ ಮತ್ತು ಮಹತ್ವಾಕಾಂಕ್ಷೆ ಇದೆ. ಶಾಪ್ ಅನ್ನು ಇನ್ನಷ್ಟು ಸುಂದರಗೊಳಿಸುವ ಕನಸೂ ಇದೆ’ ಎನ್ನುತ್ತಾರೆ ಉಮೇಶ.

ಶಿಕ್ಷಣಕ್ಕೂ, ಕುಟುಂಬ ನಿರ್ವಹಣೆಗೂ...

ಮನೆಯಲ್ಲಿ ಆರ್ಥಿಕ ಸಂಕಷ್ಟ ಎಂಬ ಕಾರಣಕ್ಕೆ ಓದು ಬಿಟ್ಟು ದುಡಿಮೆಗೆ ಸಾಗುವವರೇ ಹೆಚ್ಚು. ಯುವತಿಯರಂತೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣವನ್ನು ಅರ್ಧಕ್ಕೇ ಕೈಬಿಡುತ್ತಾರೆ. ಆದರೆ, ರಾಯಚೂರು ತಾಲೂಕು ಕಸ್ಬೆ ಕ್ಯಾಂಪ್​ನ ಸತ್ಯಸಾಯಿ ತಾರುಣಿ ಸ್ವಲ್ಪ ಭಿನ್ನ ಮನೋಭಾವದವರು. ಎಂಬ್ರಾಯ್ಡರಿ ಮತ್ತು ಟೇಲರಿಂಗ್ ಕಲಿತು ಸ್ವ ಉದ್ಯೋಗ ಆರಂಭಿಸಿದ್ದಾರೆ. ಓದಿನ ಖರ್ಚಿನ ಜತೆಗೆ ಮನೆ ನಡೆಸುವುದಕ್ಕೆ ಬೇಕಾದ ಆದಾಯವನ್ನೂ ಗಳಿಸುತ್ತಿದ್ದಾರೆ. ‘ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ನಾನು. ರೈತ ಕುಟುಂಬದವಳು. ಪ್ರಕೃತಿ ವಿಕೋಪದಿಂದಾಗಿ ಕೃಷಿ ನಡೆಸಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ, ಸ್ವ ಉದ್ಯೋಗ ಆರಂಭಿಸಬಾರದೇಕೆ ಎಂಬ ಪ್ರಶ್ನೆ ಮೂಡಿತು. ಹೊಲಿಗೆ, ಎಂಬ್ರಾಯ್ಡರಿ ಕಲಿತೆ. ಮನೆಯಲ್ಲೇ ಹೊಲಿಗೆ ಯಂತ್ರ ಇಟ್ಟುಕೊಂಡು ಮಹಿಳೆಯರ ಉಡುಪುಗಳನ್ನು ಹೊಲಿದು ಕೊಡುತ್ತೇನೆ. ಇದಲ್ಲದೆ, ಕುಪ್ಪಸ ಮತ್ತು ಸೀರೆಗಳಿಗೆ ಕಸೂತಿ ಹಾಕುವ ಕೆಲಸವನ್ನೂ ಕಳೆದ ಎರಡು ವರ್ಷಗಳಿಂದ ಮಾಡುತ್ತಿರುವೆ. ಪ್ರತಿ ತಿಂಗಳು ಜೀವನ ನಿರ್ವಹಣೆಗೆ ಇದು ನೆರವಾಗಿದೆ’ ಎನ್ನುತ್ತಾರೆ ತಾರುಣಿ.

ಸ್ಪರ್ಧಾತ್ಮಕ ಪರೀಕ್ಷೆಯ ಕನಸಿನ ಬೆನ್ನೇರಿ

ಜೀವನದಲ್ಲಿ ಸಂಕಷ್ಟವಿದೆ ಎಂದು ಹಳಿಯುವವರೇ ಹೆಚ್ಚು. ಆದರೆ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕು ಸುಲೇಪೇಟ ಗ್ರಾಮದ ಶಿವಕುಮಾರ ನಾಲ್ಕು ವರ್ಷ ಕಾಲ ಸೋದರ ಮಾವ (ತಾಯಿಯ ಸಹೋದರ)ನ ಜುವೆಲ್ಲರಿ ಶಾಪ್​ನಲ್ಲಿ ಚಿನ್ನಾಭರಣ ದುರಸ್ತಿ ಕೆಲಸ ಕಲಿತು, ಆರು ತಿಂಗಳ ಹಿಂದೆ ಸ್ವಂತ ಜ್ಯುವೆಲ್ಲರಿ ಶಾಪ್ ಆರಂಭಿಸಿದ್ದಾರೆ. ಮೂರು ವರ್ಷದವನಿರುವಾಗಲೇ ತಂದೆಯನ್ನು ಕಳೆದುಕೊಂಡ ಶಿವಕುಮಾರ, ತಾಯಿ ಆಶ್ರಯದಲ್ಲೇ ಬೆಳೆದವರು. ಪದವಿ ಓದಿನ ಜತೆಗೆ ಸ್ವ ಉದ್ಯೋಗ ಮಾಡುತ್ತ ಕುಟುಂಬ ನಿರ್ವಹಣೆಯನ್ನೂ ಮಾಡುತ್ತಿದ್ದಾರೆ. ಉದ್ಯೋಗದ ಜತೆಗೆ ಓದಿನ ಮೇಲೂ ಆಸಕ್ತಿ ಹೊಂದಿರುವ ಶಿವಕುಮಾರ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದು, ಅದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಪೊಲೀಸ್ ಹುದ್ದೆ ಸೇರುವ ಮಹದಾಸೆಯನ್ನೂ ಇಟ್ಟುಕೊಂಡಿದ್ದಾರೆ. ‘ಪೊಲೀಸ್ ಹುದ್ದೆಗೆ ಬೇಕಾದ ಎಲ್ಲ ಅರ್ಹತೆಗಳಿದ್ದು, ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಅವಕಾಶ ಸಿಕ್ಕರೆ ಸರ್ಕಾರಿ ನೌಕರಿಯಲ್ಲಿ ಮುಂದುವರಿಯುತ್ತೇನೆ. ಇಲ್ಲದಿದ್ದರೆ ಆಭರಣ ಮಳಿಗೆಯನ್ನೇ ಶೋರೂಂ ಆಗಿ ಪರಿವರ್ತಿಸುವ ಮಹದಾಸೆ ಹೊಂದಿದ್ದು, ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಸಾಗಲಿದೆ’ ಎನ್ನುತ್ತಾರೆ ಶಿವಕುಮಾರ.

ಬಡತನದ ಮಧ್ಯೆ ಬದುಕು ಕಟ್ಟಿಕೊಂಡಾಗ

ತಮ್ಮ ಇತಿಮಿತಿಯಲ್ಲೇ ಉದ್ಯೋಗ ಆರಂಭಿಸಿ ನೆಮ್ಮದಿ ಜೀವನ ಸಾಗಿಸಬಹುದು ಎಂಬುದನ್ನು ಲಕ್ಷ್ಮೀಪುರ ವಾಡಿಯ ಚಂದ್ರಕಲಾ ಮಂತಟ್ಟಿ ಸಾಬೀತುಪಡಿಸಿದ್ದು, ಉದ್ಯೋಗ, ಕುಟುಂಬವನ್ನು ಯಶಸ್ವಿಯಾಗಿ ನಿರ್ವಹಿಸುತ್ತ ಮಾದರಿಯಾಗಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಯುವ ಉದ್ಯಮಿ ಸಂಸ್ಥೆಯೊಂದಿಗೆ ಕೈ ಜೋಡಿಸಿದ ಚಂದ್ರಕಲಾ, ಮಕ್ಕಳಿಗೆ ನಲಿ-ಕಲಿ ಕಾರ್ಡ್ ವಿತರಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಅದೇ ಸಂಸ್ಥೆಯಿಂದ ಕಡಿಮೆ ಬಂಡವಾಳದಲ್ಲಿ ಹೇಗೆ ಉದ್ಯಮ ಆರಂಭಿಸಬಹುದು ಎಂಬ ಕುರಿತು ತರಬೇತಿ ಪಡೆದರು. ಬಳಿಕ 50,000 ರೂಪಾಯಿ ಕೈಸಾಲ ಪಡೆದು ಆರು ತಿಂಗಳ ಹಿಂದೆ ಜೆರಾಕ್ಸ್ ಅಂಗಡಿ ಆರಂಭಿಸಿದರು. ಈಗ ಲ್ಯಾಮಿನೇಷನ್ ಯಂತ್ರವನ್ನು ಇಟ್ಟಿದ್ದಾರೆ. ಇದರಿಂದ ಪ್ರತಿ ತಿಂಗಳು ಮನೆ ನಡೆಸುವಷ್ಟು ಆದಾಯ ಗಳಿಸುತ್ತಿದ್ದಾರೆ. ಚಂದ್ರಕಲಾ ಅವರ ಪತಿ ಫೈನಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೆರಾಕ್ಸ್ ಅಂಗಡಿಯಲ್ಲೇ ಕಂಪ್ಯೂಟರ್ ಅಳವಡಿಸಿ ಅಪ್​ಡೇಟ್ ಮಾಡುವ ಆಶಯ ಹೊಂದಿದ್ದಾರೆ. ಮೂವರು ಪುತ್ರಿಯರು, ಪುತ್ರ, ಪತಿಯೊಂದಿಗೆ ನೆಮ್ಮದಿ ಜೀವನ ಸಾಗಿಸುತ್ತಿರುವ ಚಂದ್ರಕಲಾ ಅವರು ಜೆರಾಕ್ಸ್ ಅಂಗಡಿ ಜತೆಗೆ ಪಿಕೋಫಾಲ್ ಮಷಿನ್ ಖರೀದಿಸಿ ವ್ಯಾಪಾರ ವಿಸ್ತರಿಸುವ ಆಲೋಚನೆ ಹೊಂದಿದ್ದಾರೆ.

ಮೂರ್ನಾಲ್ಕು ಮಹಿಳೆಯರ ಉದ್ಯೋಗದಾತೆ

ಗೌರಿಬಿದನೂರು ತಾಲೂಕಿನ ತೊಂಡೇಬಾವಿಯ ಡಿ.ಎಂ.ಭಾವನಾ ಟೇಲರಿಂಗ್ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ನಳಿನಾ ಮತ್ತು ಮಂಜುನಾಥ್ ದಂಪತಿ ಪುತ್ರಿ ಭಾವನಾ ಓದಿದ್ದು ಎಸ್ಸೆಸ್ಸೆಲ್ಸಿ. ಮನೆಯ ಕೆಲಸದ ಜತೆಗೆ ತಾಯಿ ಟೇಲರಿಂಗ್ ಕಲಿತಿದ್ದರು. ಇನ್ನೊಬ್ಬರನ್ನು ಅವಲಂಬಿಸದೆ ಇತರರಿಗೆ ಮಾದರಿಯಾಗಿ ಸ್ವಾಭಿಮಾನದ ಬದುಕು ಸಾಗಿಸಬೇಕೆಂಬ ತಾಯಿ ನಳಿನಾ ಅವರ ಮಾತಿನಿಂದ ಪ್ರೇರಿತರಾಗಿ ಟೇಲರಿಂಗ್ ಕಲಿತುಕೊಂಡಿದ್ದೇ ಜೀವನಕ್ಕೆ ಆಸರೆಯಾಗಿದೆ. ಶ್ರದ್ಧೆ, ಪ್ರಾಮಾಣಿಕತೆ, ಉತ್ತಮ ಸ್ಪಂದನೆಯ ತತ್ತ್ವದಲ್ಲಿ ದುಡಿಮೆಗೆ ಒಳ್ಳೆಯ ಹೆಸರು ಸಿಕ್ಕಿದೆ. ಇವರ ಬಗ್ಗೆ ತಿಳಿದು ಸುತ್ತಲಿನ ಗ್ರಾಮಗಳ ಮಹಿಳೆಯರೂ ಬಟ್ಟೆ ಹೊಲಿದುಕೊಡುವಂತೆ ಬರುತ್ತಿದ್ದು ನಿರಂತರ ಗ್ರಾಹಕರ ಹೆಚ್ಚಳದಿಂದ ಕೈ ತುಂಬಾ ಕೆಲಸ ಇದೆ. ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿರುವ ಮೂರ್ನಾಲ್ಕು ಮಹಿಳೆಯರಿಗೂ ಉದ್ಯೋಗ ನೀಡಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಜನರಿಗೆ ಕೆಲಸ ದೊರಕಿಸಿಕೊಡುವ ಆಶಯ ಹೊಂದಿದ್ದಾರೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ ಯಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಕಲಿತ ಕೆಲಸವೇ ಕೈ ಹಿಡಿದಿದ್ದು. ಗ್ರಾಮೀಣ ಭಾಗದಲ್ಲಿ ಅನೇಕರು ಕೆಲಸ ವಿಲ್ಲದೆ ನಗರ, ಪಟ್ಟಣ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಾರೆ. ಆದರೆ, ಸ್ಥಳೀಯವಾಗಿ ಸಿಗುವ ಸವಲತ್ತು ಗಳನ್ನು ಸದ್ವಿನಿಯೋಗಪಡಿಸಿಕೊಂಡು ವೃತ್ತಿ ಕೈಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಅಪವಾದ ಎನ್ನುವಂತೆ ಊರಿನಲ್ಲಿಯೇ ಸ್ವಯಂ ಉದ್ಯೋಗದ ಕಾಯಕದ ಮೂಲಕ ಜೀವನ ಸಾಗಿಸುವುದರ ಜತೆಗೆ ಇತರರಿಗೂ ಕೆಲಸ ಕೊಡುವ ಶಕ್ತಿ ಬೆಳೆಸಿಕೊಂಡಿದ್ದಾರೆ. ‘ಸ್ವಂತ ಬಲದಿಂದ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸರ್ಕಾರದಿಂದ ಆರ್ಥಿಕ ನೆರವು ಸಿಗಬೇಕು. ಅದರಲ್ಲೂ ಸ್ತ್ರೀ ಸಬಲೀಕರಣಕ್ಕೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ಭಾವನಾ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net