VIDEO: ರಾಷ್ಟ್ರಪತಿಯಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸುವಾಗ ಎಲ್ಲರ ಹೃದಯ ಗೆದ್ದ ಶೀತಲ್​ ದೇವಿ

sheetal web
Published on

ನವದೆಹಲಿ: ಅಪರೂಪದ ವೈದ್ಯಕಿಯ ಸ್ಥಿತಿ "ಫೋಕೋಮೆಲಿಯಾ'ದಿಂದಾಗಿ ಬಾಲ್ಯದಿಂದಲೂ ಎರಡೂ ಕೈಗಳ ಬೆಳವಣಿಗೆ ಕಾಣದಿರುವ 16 ವರ್ಷದ ಬಿಲ್ಗಾರ್ತಿ ಶೀತಲ್​ ದೇವಿ, ಅಂತಾರಾಷ್ಟ್ರೀಯ ಪ್ಯಾರಾ ಆರ್ಚರಿ ಚಾಂಪಿಯನ್​ ಆಗಿದ್ದಾರೆ. ಅವರು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸ್ವೀಕರಿಸುವ ವೇಳೆ ಎಲ್ಲರ ಹೃದಯ ಗೆದ್ದರು. ಅವರಿಗೆ ಪ್ರಶಸ್ತಿ ಪ್ರದಾನ ಮಾಡುವಾಗ ಸ್ವತಃ ರಾಷ್ಟ್ರಪತಿಯವರೇ ಅರ್ಜುನ ಪ್ರಶಸ್ತಿಯ ಪ್ರತಿಮೆ ಮತ್ತು ಪ್ರಶಸ್ತಿಪತ್ರವನ್ನು ಹೀಡಿದು ಶೀತಲ್​ ಜತೆ ಪೋಸ್​ ನೀಡಿದ್ದು ವಿಶೇಷವಾಗಿತ್ತು ಮತ್ತು ಹೆಚ್ಚಿನವರ ಕಣ್ಣುಗಳು ಮಂಜಾಗುವಂತೆ ಮಾಡಿತು.

ತವರಿನ ಏಕದಿನ ವಿಶ್ವಕಪ್​ನಲ್ಲಿ ಸರ್ವಾದಿಕ ವಿಕೆಟ್​ ಕಬಳಿಸಿ ಮಿಂಚಿದ್ದ ಟೀಮ್​ ಇಂಡಿಯಾ ವೇಗಿ ಮೊಹಮದ್​ ಶಮಿ, ಹಾಂಗ್​ರೆೌ ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದು ಬೀಗಿದ್ದ ಎರಡೂ ಕೈಗಳಿಲ್ಲದ ಬಿಲ್ಗಾರ್ತಿ ಶೀತಲ್​ ದೇವಿ ಸಹಿತ 25 ಕ್ರೀಡಾಪಟುಗಳಿಗೆ ರಾಷ್ಟ್ರಪತಿ ದ್ರೌಪದಿ ಮುಮುರ್ ಅವರು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನು ವೀಲ್​ಚೇರ್​ನಲ್ಲಿ ಆಗಮಿಸಿದ ಪ್ಯಾರಾ ಕನೋಯಿಂಗ್​ ಪಟು ಪ್ರಾಚಿ ಯಾದವ್​ಗೂ ರಾಷ್ಟ್ರಪತಿ ವೇದಿಕೆಯಿಂದ ಕೆಳಗಿಳಿದು ಬಂದು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ 2023ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಮಿ ಮತ್ತು ಶೀತಲ್​ ಪ್ರೇಕ್ಷಕರಿಂದ ಭಾರಿ ಕರತಾಡನದ ವಿಶೇಷ ಮೆಚ್ಚುಗೆ ಪಡೆದರು. ಸಾಮಾನ್ಯವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್​ 29ರಂದು ನಡೆಯುತ್ತಿದ್ದ ಸಮಾರಂಭ ಈ ಬಾರಿ, ಏಷ್ಯಾಡ್​ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಉದ್ದೇಶದಿಂದಾಗಿ ಮುಂದೂಡಲ್ಪಟ್ಟಿತ್ತು. ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದ 26 ಕ್ರೀಡಾಪಟುಗಳ ಪೈಕಿ ಯುವ ಶೂಟರ್​ ಇಶಾ ಸಿಂಗ್​ ಮಾತ್ರ ಗೈರಾಗಿದ್ದರು. 19 ವರ್ಷದ ಇಶಾ ಜಕಾರ್ತದಲ್ಲಿ ಏಷ್ಯನ್​ ಒಲಿಂಪಿಕ್ಸ್​ ಅರ್ಹತಾ ಕೂಟದಲ್ಲಿ ಪಾಲ್ಗೊಂಡಿರುವ ಕಾರಣದಿಂದಾಗಿ ಸಮಾರಂಭದಲ್ಲಿ ಹಾಜರಿರಲಿಲ್ಲ. ಸೋಮವಾರವಷ್ಟೇ ಅವರು 10 ಮೀ. ಏರ್​ ಪಿಸ್ತೂಲ್​ ವಿಭಾಗದಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದ್ದರು.

ಕಳೆದ ವರ್ಷ ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ ದಾಖಲೆಯ 107 ಪದಕ ಮತ್ತು ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ 111 ಪದಕಗಳನ್ನು ಗೆದ್ದುಕೊಟ್ಟಿದ್ದ ಕ್ರೀಡಾಸಾಧಕರಲ್ಲೇ ಹೆಚ್ಚಿನವರು ಈ ಬಾರಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚೆಸ್​ ಗ್ರಾಂಡ್​ ಮಾಸ್ಟರ್​ ಆರ್​. ವೈಶಾಲಿ ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡುವಾಗಲೂ ಪ್ರೇಕ್ಷಕರ ಬಳಗದಿಂದ ಭಾರಿ ಕರತಾಡನ ಕೇಳಿಸಿತು. ವೈಶಾಲಿ ಅವರು ಚೆಸ್​ ವಿಶ್ವಕಪ್​ ರನ್ನರ್​ಅಪ್​ ಆರ್​. ಪ್ರಜ್ಞಾನಂದ ಅವರ ಅಕ್ಕ ಆಗಿದ್ದಾರೆ.

ಕುಸ್ತಿಪಟು ಅಂತಿಮ್​ ಪಾಂಗಲ್​, ಬಾಕ್ಸರ್​ ಮೊಹಮದ್​ ಹುಸಮುದ್ದೀನ್​, ಅಥ್ಲೀಟ್​ ಪಾರುಲ್​ ಚೌಧರಿ, ಅಂಧರ ಕ್ರಿಕೆಟ್​ ತಂಡದ ನಾಯಕ ಅಜಯ್​ಕುಮಾರ್​ ರೆಡ್ಡಿ, ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದ ಬಿಲ್ಗಾರರಾದ ಓಜಸ್​ ಪ್ರವಿಣ್​, ಅದಿತಿ ಗೋಪಿಚಂದ್​ ಸ್ವಾಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಇತರ ಪ್ರಮುಖರು. 8 ಕೋಚ್​ಗಳು ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಮೂವರು ಮಾಜಿ ಕ್ರೀಡಾಪಟುಗಳು ಜೀವಮಾನ ಸಾಧನೆಗಾಗಿ ಧ್ಯಾನ್​ಚಂದ್​ ಪ್ರಶಸ್ತಿಯನ್ನೂ ಸ್ವೀಕರಿಸಿದರು.

ಖೇಲ್​ರತ್ನ ಪ್ರಶಸ್ತಿ 25 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದ್ದರೆ, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ತಲಾ 15 ಲಕ್ಷ ರೂ. ಮತ್ತು ಧ್ಯಾನ್​ಚಂದ್​ ಪ್ರಶಸ್ತಿ 10 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

ಫಿಟ್ನೆಸ್​ನತ್ತ ಶಮಿ ಗಮನ

ಇಂಗ್ಲೆಂಡ್​ ವಿರುದ್ಧದ ತವರಿನ ಸರಣಿಗೆ ಫಿಟ್​ ಆಗುವತ್ತ ಗಮನಹರಿಸಿರುವೆ ಎಂದು 33 ವರ್ಷದ ಮೊಹಮದ್​ ಶಮಿ ಹೇಳಿದ್ದಾರೆ. ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಮಿ, ನನ್ನ ಕನಸು ನನಸಾಗಿದೆ. ಇದು ನನ್ನ ಜೀವನದ ಬಹುದೊಡ್ಡ ಸಾಧನೆ. ನನ್ನ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಲ ಎಂದರು. ಪಾದದ ನೋವಿಗೆ ಶಮಿ ಸದ್ಯ ಬೆಂಗಳೂರಿನ ಎನ್​ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net