ಎನ್ನೆಸ್ಸೆಸ್ ಶಿಬಿರಗಳಿಂದ ಸೇವಾ ಮನೋಭಾವ ವೃದ್ಧಿ

National Service Scheme Special Camp
National Service Scheme Special Camp nelamangala
Published on

ಕಣೇಗೌಡನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಸುವಲ್ಲಿ ಎನ್‌ಎಸ್‌ಎಸ್ ಶಿಬಿರಗಳು ಪೂರಕವಾಗಿವೆ ಎಂದು ಕಣೇಗೌಡನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಕಣೇಗೌಡನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಶ್ರೀ ಮುರಳಿ ಪದವಿಪೂರ್ವ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಯುವಜನತೆ ದೇಶದ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು. ಗ್ರಾಮೀಣ ಭಾಗದ ಜನಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಿರಬೇಕು. ಭವಿಷ್ಯದಲ್ಲಿ ರಾಜಕಾರಣಿ, ಅಧಿಕಾರಿ, ಉದ್ಯಮಿಗಳಾಗುವ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿದೆ ಎಂದ ಅವರು, ಶ್ರಮದಾನದ ಜತೆಗೆ ಸ್ವಚ್ಛತೆ, ಆರೋಗ್ಯ ಪರಿಸರ ಸಂರಕ್ಷಣೆಯಂತಹ ಕೆಲಸ ಮಾಡುವ ಎನ್‌ಎಸ್‌ಎಸ್ ಶಿಬಿರಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿದಿಸೆಯಲ್ಲಿ ದೊರಕುವ ಪ್ರತಿಯೊಂದು ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ವಿಷಯವಾಗಿ ಉಳಿಯಲಿದೆ. ಉತ್ತಮ ಆಲೋಚನೆ ಬೆಳೆಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಗ್ರಾಮದ ಸರ್ಕಾರಿ ಶಾಲೆ, ದೇವಾಲಯ ಸ್ವಚ್ಛಗೊಳಿಸುವುದು, ಗಿಡನೆಡುವುದು, ಆರೋಗ್ಯ ಕುರಿತಾದ ಜನಜಾಗೃತಿ ಜತೆಗೆ ಮಳೆನೀರು ಕೊಯ್ಲು ಪದ್ಧತಿ ಅಳವಡಿಕೆ, ಇಂಗುಗುಂಡಿ ನಿರ್ಮಾಣ ಕುರಿತಾಗಿ ಗ್ರಾಮಸ್ಥರಲ್ಲಿ ಜನಸಂಪನ್ಮೂಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಶಿಬಿರಾಧಿಕಾರಿ ಎಂ.ಪಿ.ಮಾರುತಿ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮಕೃಷ್ಣಪ್ಪ ರಾಷ್ಟ್ರೀಯ ಸೇವಾ ಯೋಜನೆಯ ಧ್ವಜಾರೋಹಣ ನೆರವೇರಿಸಿದರು. ನಂತರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಸಿರು ಗಿಡನೆಟ್ಟು ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕಣೇಗೌಡನಹಳ್ಳಿ ಗ್ರಾಪಂ ಸದಸ್ಯರಾದ ಮಾರೇಗೌಡ, ಮುನಿರಾಜು, ಕಾರ್ಯದರ್ಶಿ ಹನುಮಂತರಾಯಪ್ಪ, ಸಿಬ್ಬಂದಿ ಸಿ.ಪಿ.ಶ್ರೀನಿವಾಸ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಚನ್ನೇಗೌಡ, ಸಹಶಿಬಿರಾಧಿಕಾರಿ ಶಿವನಾಯಕ್, ಮುಖಂಡ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net