

ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ದೇರಳಕಟ್ಟೆ ಯೆನೆಪೋಯ ನ್ಯಾಚುರೋಪತಿ, ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪೋಷಣಾ ಮಾಸಾರಂಭದ ಉದ್ಘಾಟನಾ ಸಮಾರಂಭ ನಡೆಯಿತು.
ಯೆನೆಪೋಯ ನ್ಯಾಚುರೋಪತಿ, ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪುನೀತ್ ರಾಘವೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗ ಪೋಷಣಾ ಜಾಗೃತಿಗೆ ಹೆಚ್ಚು ಕೊಡುಗೆ ನೀಡಬೇಕು ಎಂದರು.
ಪೋಷಣಾ ಸಂಬಂಧಿತ ವಿದ್ಯಾರ್ಥಿಗಳ ಕೃತಿಗಳನ್ನು ಒಳಗೊಂಡ ಪತ್ರಿಕೆ ಮುಖಪುಟ ಬಿಡುಗಡೆಗೊಳಿಸಲಾಯಿತು. ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಕ್ಷಯ ಕೆ.ಎಂ. ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪೋಷಣ ಮತ್ತು ಆಹಾರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಜಿತ್ ಕೆ. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಸುನಿತಾ ಡಿಸೋಜ ವಂದಿಸಿದರು.