

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯಾದ್ಯಂತ ಸೆ.13ರಂದು ಈ ವರ್ಷದ 2ನೇ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, ಉಡುಪಿ ಜಿಲ್ಲೆಯಲ್ಲೂ ನಡೆಯಲಿದೆ. ಸದರಿ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳೊಂದಿಗೆ ಈ ಬಾರಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ಸಹ ಇತ್ಯರ್ಥ ಮಾಡಲಾಗುವುದು ಎಂದು ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ ಎಸ್. ಗಂಗಣ್ಣನವರ್ ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾ ನ್ಯಾಯಾಲಯದ ಕಾನ್ಫರೆನ್ಸ್ ಹಾಲ್ನಲ್ಲಿ ಸೆಪ್ಟೆಂಬರ್ 8ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರು ರಾಜೀ ಮೂಲಕ ಹಳೆಯ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದರು.
ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಇ-ಚಲನ್ ಪ್ರಕರಣಗಳನ್ನು ದಂಡ ಭರಿಸಿ ನಿವಾರಿಸಿಕೊಳ್ಳಬೇಕು. ರಾಜ್ಯಾದ್ಯಂತ ಇಂತಹ ಪ್ರಕರಣಗಳಿಗೆ ದಂಡ ಪಾವತಿಯಲ್ಲಿ ಶೇ.50 ರಿಯಾಯಿತಿ ನೀಡಲಾಗಿದ್ದು, ಅದು ಸೆ.12ಕ್ಕೆ ಅಂತ್ಯವಾಗಲಿದೆ. ಇಂತಹ ಸಣ್ಣಪುಟ್ಟ ಪ್ರಕರಣಗಳಿಗೆ ಕೋರ್ಟ್ ಮೆಟ್ಟಿಲೇರಿದರೆ ನ್ಯಾಯಾಲಯದ ಸಮಯವೂ ವ್ಯರ್ಥವಾಗಲಿದೆ ಎಂದರು ನ್ಯಾಯಾಧೀಶ ಗಂಗಣ್ಣನವರ್.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮನು ಪಟೇಲ್ ಮಾತನಾಡಿ, ಈ ಹಿಂದೆ ನಡೆದ ವರ್ಷದ ಪ್ರಥಮ ಲೋಕ ಅದಾಲತ್ನಲ್ಲಿ ವಿವಿಧ ಪ್ರಕರಣ ಹಾಗೂ ವ್ಯಾಜ್ಯಗಳಿಗೆ ಸಂಬಂಧಿಸಿ ಒಟ್ಟು 48,120 ಕೇಸ್ ಇತ್ಯರ್ಥವಾಗಿತ್ತು. ಜಿಲ್ಲೆಯಲ್ಲಿ ಈಗ ಒಟ್ಟು 36,070 ಪ್ರಕರಣ ಬಾಕಿ ಇದ್ದು, ರಾಜಿಯಾಗಬಲ್ಲಂತಹ 5,581 ಕೇಸ್ ಗುರುತಿಸಲಾಗಿದೆ. ಇದರಲ್ಲಿ 1,993 ಪ್ರಕರಣಗಳನ್ನು ಈ ಅದಾಲತ್ನಲ್ಲಿ ಇತ್ಯರ್ಥ ಮಾಡಲಾಗುವುದು. ಈ ಸಂಖ್ಯೆ ಇನ್ನೂ ಹೆಚ್ಚಳವಾಗಬಹುದು ಎಂದರು.
ರಾಷ್ಟ್ರೀಯ ಲೋಕ ಅದಾಲತ್ ಅಷ್ಟೇ ಅಲ್ಲದೆ, ಖಾಯಂ ಜನತಾ ನ್ಯಾಯಾಲಯ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಈ ಮೊದಲು ದಕ ಜಿಲ್ಲೆ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯ ವ್ಯಾಜ್ಯಗಳನ್ನು ನಿವಾರಿಸಲು ಮಂಗಳೂರಿನಲ್ಲಿ ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. ಈ ಕೋರ್ಟ್ನಲ್ಲಿ ಯಾವಾಗ ಬೇಕಾದರೂ ವ್ಯಾಜ್ಯ ಪರಿಹರಿಸಿಕೊಳ್ಳಬಹುದಾಗಿದೆ. ಮೂರು ಜಿಲ್ಲೆಯ ಸಾರ್ವಜನಿಕರಿಗೆ ವಿಚಾರಣೆ ಎದುರಿಸಲು ಮಂಗಳೂರಿಗೆ ಬರಲು ಬಹಳ ದೂರವಾಗುತ್ತದೆ. ಹೀಗಾಗಿ ಈ ವರ್ಷದ ಜು.5ರಂದು ಈ ನಾಲ್ಕೂ ಜಿಲ್ಲೆಗಳಲ್ಲಿ ಖಾಯಂ ಜನತಾ ನ್ಯಾಯಾಲಯ ಕಾರ್ಯ ನಿರ್ವಹಿಸಲಿದೆ. ಜಿಲ್ಲಾ ನ್ಯಾಯಾಲಯದಲ್ಲೇ ನಿರ್ದಿಷ್ಟ ದಿನ ನಿಗದಿ ಮಾಡಿಕೊಂಡು ಮಂಗಳೂರು ಪೀಠದ ನ್ಯಾಯಾಧೀಶರ ಉಪಸ್ಥಿಯಲ್ಲಿ ವ್ಯಾಜ್ಯ ಇತ್ಯರ್ಥ ಮಾಡಿಕೊಳ್ಳುವ ಇನ್ನೊಂದು ಅವಕಾಶವಿದೆ ಎಂದು ನ್ಯಾ.ಕಿರಣ ಎಸ್. ಗಂಗಣ್ಣನವರ್ ತಿಳಿಸಿದರು.