

ತುಮಕೂರು: ಮಹಾರಾಷ್ಟ್ರ ಬಾಲಕ, ಬಾಲಕಿಯರು ರಾಷ್ಟ್ರೀಯ ಸಬ್ ಜೂನಿಯರ್ ಹೊನಲುಬೆಳಕಿನ ಖೋ-ಖೋ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪ್ರಶಸ್ತಿ ಸುತ್ತಿನಲ್ಲಿ ಆತಿಥೇಯರು ಎಡವಿದರು.
ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಅಂತಿಮಪಂದ್ಯದಲ್ಲಿ ತೀವ್ರ ಹಣಾಹಣಿ ಹೋರಾಟದಲ್ಲಿ ಆತಿಥೇಯ ಕರ್ನಾಟಕ ಬಾಲಕಿಯರ ತಂಡ 14-16ರಿಂದ ಬಲಾಢ್ಯ ಮಹಾರಾಷ್ಟ್ರದ ಎದುರು ಶರಣಾಯಿತು. ತೀವ್ರ ಪೈಪೋಟಿ ನೀಡಿದರಾದರೂ ಆತಿಥೇಯ ಬಾಲಕಿಯರಿಗೆ ಪ್ರಶಸ್ತಿ ಕೈಗೆಟುಕಲಿಲ್ಲ. 2 ಅಂಕಗಳಿಂದ ಸೋಲುಂಡರು.
ಬಾಲಕರ ವಿಭಾಗದಲ್ಲು ಮಹಾರಾಷ್ಟ್ರ ತಂಡ ಪ್ರಾಬಲ್ಯ ಮೆರೆಯಿತು. ಕರ್ನಾಟಕ ಬಾಲಕರ ತಂಡ 22-34 ಅಂಕಗಳ ಅಂತರದಿಂದ ಮಹಾರಾಷ್ಟ್ರ ವಿರುದ್ಧ ಸೋಲನುಭವಿಸಿತು.
ಇದಕ್ಕು ಮುನ್ನ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಆತಿಥೇಯ ಬಾಲಕಿಯರು24-22 ಅಂಕಗಳ ಅಂತರದೊಂದಿಗೆ ಕೊಲ್ಲಾಪುರ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡವು ದೆಹಲಿ ತಂಡವನ್ನು 28-24 ಅಂಕಗಳ ಅಂತರದಿಂದ ಮಣಿಸಿ ಫೈನಲ್ಗೆ ಅರ್ಹತೆ ಪಡೆಯಿತು.
ಮತ್ತೊಂದು ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರ ಬಾಲಕಿಯರು 26-22 ಅಂಕಗಳ ಅಂತರದಿಂದ ರಾಜಸ್ಥಾನ ವಿರುದ್ಧ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟರು. ಇನ್ನೂ ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರ ತಂಡ 22-16 ಅಂಕಗಳ ಅಂತರದಿಂದ ತೆಲಂಗಾಣ ವಿರುದ್ಧ ಭರ್ಜರಿ ಜಯಗಳಿಸಿ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟಿತು.
ತೃತೀಯ ಸ್ಥಾನ: ಬಾಲಕಿಯರ ವಿಭಾಗದಲ್ಲಿ ಕೊಲ್ಲಾಪುರ ತಂಡ ತೃತೀಯ ಸ್ಥಾನ ಪಡೆದರೆ, ರಾಜಸ್ಥಾನ ನಾಲ್ಕನೇ ಸ್ಥಾನಗಳಿಸಿತು. ಬಾಲಕರ ವಿಭಾಗದಲ್ಲಿ ತೆಲಂಗಾಣ ತೃತೀಯ ಸ್ಥಾನ, ದೆಹಲಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.
ಡಿ.13ರಂದು ಪ್ರಾರಂಭವಾದ 5 ದಿನಗಳ ಖೋ-ಖೋ ಪಂದ್ಯಾವಳಿಯಲ್ಲಿ 26 ರಾಜ್ಯಗಳಿಂದ 780ಕ್ಕೊ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. 5 ದಿನಗಳ ಕ್ರೀಡಾಹಬ್ಬಕ್ಕೆ ಸಹಸ್ರಾರು ಕ್ರೀಡಾಭಿಮಾನಿಗಳು ಸಾಕ್ಷಿಯಾದರು.
ಶ್ರೇಷ್ಟ ಆಟಗಾರರು ಬಾಲಕರ ವಿಭಾಗದಲ್ಲಿ ಶ್ರೇಷ್ಟ ಆಟಗಾರ ಪ್ರಶಸ್ತಿಗೆ ಮಹಾರಾಷ್ಟ್ರದ ಆರಾಧ್ಯ ಭಾಜನರಾದರು. ಇನ್ನೂ ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಮೈಥಿಲಿ ಪವಾರ್ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡರು.