

ಉಪ್ಪಿನಂಗಡಿ: ರಾಷ್ಟ್ರಮಟ್ಟದ ಕ್ರೀಡಾಕೂಟ ಕ್ರಾಸ್ ಕಂಟ್ರಿ ರೇಸ್ (ಗುಡ್ಡಗಾಡು ಓಟ) ಸ್ಪರ್ಧೆ ಗ್ರಾಮೀಣ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ನಡೆಯಲಿದ್ದು, ಇತಿಹಾಸದಲ್ಲೇ ಮೊದಲೆಂಬಂತೆ ಸ್ಪರ್ಧೆ ಆಯೋಜನೆಯ ಅವಕಾಶ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಲಭಿಸಿದೆ. ಹಾಗಾಗಿ ಸ್ಪರ್ಧಾಕೂಟವನ್ನು ಊರಿಗೆ ಹೆಗ್ಗಳಿಕೆ ತರುವಂತೆ ನಡೆಸಬೇಕಾಗಿದೆ ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕ್ರೀಡಾಕೂಟ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿ, 10 ಕಿಲೋ ಮೀಟರ್ ಕ್ರಾಸ್ ಕಂಟ್ರಿ ರೇಸ್ ನಡೆಯಲಿದ್ದು, ದೇಶದಾದ್ಯಂತ 150 ವಿಶ್ವವಿದ್ಯಾಲಯಗಳಿಂದ 1200 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 30 ಟೆಕ್ನಿಕಲ್ ಅಧಿಕಾರಿಗಳು ಬರಲಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಸ್ಪರ್ಧೆಯ ದಾಖಲೆಗಳನ್ನು ಚಿಪ್ ಆಧಾರಿತವಾಗಿ ಕಂಪ್ಯೂಟರೀಕೃತವಾಗಿ ದಾಖಲು ಮಾಡಲಾಗುವುದು ಎಂದು ತಿಳಿಸಿದರು.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿದರು. ಊರ ನಾಗರಿಕರನ್ನು ಒಳಗೊಂಡ ಸಮಿತಿ ರಚಿಸಿರುವ ಬಗ್ಗೆ ಡಾ. ರಾಜಾರಾಮ್ ಕೆ.ಬಿ.ತಿಳಿಸಿದರು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪಿಡಿಒ. ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ಸೋಮನಾಥ, ಕೃಷ್ಣ ರಾವ್ ಅರ್ತಿಲ, ದೇವಿದಾಸ ರೈ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶ್ರಫ್ ಬಸ್ತಿಕಾರ್, ಜಾನ್ ಕೆನ್ಯೂಟ್, ವಿನ್ಸೆಂಟ್ ಫರ್ನಾಂಡಿಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಯು.ಟಿ. ತೌಸೀಫ್, ಅಬ್ದುಲ್ ರಶೀದ್, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಅಜೀಜ್ ಬಸ್ತಿಕಾರ್, ಜಯಂತ ಪೊರೋಳಿ, ಇಸ್ಮಾಯಿಲ್ ಇಕ್ಬಾಲ್, ಚಂದಪ್ಪ ಮೂಲ್ಯ, ಆದಂ ಕೊಪ್ಪಳ, ಅನಿ ಮೆನೇಜಸ್, ಅನುರಾಧಾ ಶೆಟ್ಟಿ, ಕೈಲಾರ್ ರಾಜ್‌ಗೋಪಾಲ್ ಭಟ್, ಶರೀಕ್ ಅರಫ, ಯು. ರಾಮ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಶೇಖರ್ ಕನ್ನಡ ಸ್ವಾಗತಿಸಿದರು. ಉಪನ್ಯಾಸಕ ಬಾಲಾಜಿ ವಂದಿಸಿದರು. ಪ್ರಮೋದ್ ಕಾರ‌್ಯಕ್ರಮ ನಿರೂಪಿಸಿದರು.