

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರವು (ಐಐಎಚ್‌ಆರ್) ತನ್ನ ಕ್ಯಾಂಪಸ್ ಆವರಣದಲ್ಲಿ ಫೆ.27ರಿಂದ ಮೂರು ದಿನ ‘ರಾಷ್ಟ್ರೀಯ ತೋಟಗಾರಿಕೆ ಮೇಳ - 2025’ ಆಯೋಜಿಸಿದೆ.
‘ವಿಕಸಿತ ಭಾರತಕ್ಕಾಗಿ ತೋಟಗಾರಿಕೆ - ಪೌಷ್ಟಿಕಾಂಶ, ಸಬಲೀಕರಣ ಹಾಗೂ ಜೀವನೋಪಾಯ’ ಮೇಳದ ಥೀಮ್ ಆಗಿದ್ದು, ಬೆಳೆಗಳ ಮೂಲಕ ಪೌಷ್ಟಿಕಾಂಶವುಳ್ಳ ತಳಿಗಳ ಪ್ರೋತ್ಸಾಹ ಹಾಗೂ ತಾಂತ್ರಿಕತೆಯನ್ನು ಮುನ್ನೆಲೆಗೆ ತರಲು ಆದ್ಯತೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ 250 ಸಂಸ್ಥೆಗಳು ತಮ್ಮಲ್ಲಿ ಆವಿಷ್ಕರಿಸಿರುವ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ. ಜತೆಗೆ ಐಐಎಚ್‌ಆರ್ ಕೂಡ ಬೆಳೆ ಸಂರಕ್ಷಣೆ, ಮೌಲ್ಯವರ್ಧನೆ, ಯಂತ್ರೋಪಕರಣ ಹಾಗೂ ಉಪಕರಣಗಳಿಗೆ ಸಂಬಂಧಿಸಿ 250ಕ್ಕೂ ಹೆಚ್ಚು ವಿಧದ ತಾಂತ್ರಿಕತೆಯನ್ನು ಮಳಿಗೆಗಳಲ್ಲಿ ರೈತರಿಗಾಗಿ ಪ್ರದರ್ಶಿಸಿ ಮಾಹಿತಿ ನೀಡಲಿದೆ.
ಹೊಸ ತಳಿಗಳ ಬಿಡುಗಡೆ:
ಹೆಚ್ಚು ಇಳುವರಿ ನೀಡುವ ಕಲ್ಲಂಗಡಿ ತಳಿ, ಕಾಂಡ ಕೊರಕ/ಎಲೆಚುಕ್ಕಿ ರೋಗ ತಡೆದುಕೊಳ್ಳುವ ‘ಅರ್ಕಾ ದೃಷ್ಟಿ, ಅರ್ಕಾ ನಿಹಿರಾ’ ಮೆಣಸಿನಕಾಯಿ ತಳಿ, ಅಧಿಕ ಇಳುವರಿಯ ಸೋರೆಕಾಯಿ ತಳಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಜತೆಗೆ ರೆಡ್ ಡ್ರ್ಯಾಗನ್ ಫ್ರೂಟ್ ಪೌಡರ್ ತಂತ್ರಜ್ಞಾನ, ಹಲಸಿನ ಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನ, ವಿಟಮಿನ್ ಡಿ ಅಧಿಕವುಳ್ಳ ಅಣಬೆ ಸಹಿತ ಇತರ ತಳಿಗಳು ಹಾಗೂ ತೋಟದ ಬೆಳೆಗಳನ್ನು ರೈತರಿಗೆ ಪರಿಚಯಿಸಲಾಗುತ್ತದೆ.
ಮುಖ್ಯವಾಗಿ ರೈತರಿಗೆ ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ವಿವಿಧ ತಳಿಗಳು ಹಾಗೂ ತಾಂತ್ರಿಕತೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ನಗರ ಕೃಷಿ, ಲಂಬ ಕೃಷಿ ಬಗ್ಗೆ ಮಾಹಿತಿ, ಅಣಬೆ ಬೇಸಾಯದ ಬಗ್ಗೆ ಕೌಶಲ ಆಧಾರಿತ ಕಾರ್ಯಾಗಾರ, ತೋಟಗಾರಿಕೆ ತಳಿಗಳ ಬೀಜಗಳು, ಸಂಸ್ಕರಿತ ಉತ್ಪನ್ನಗಳು, ಗಿಡಗಳ ಆರೈಕೆಗೆ ಬಳಸುವ ಸಾಧನ ಇತ್ಯಾದಿ ಉಪಕರಣಗಳನ್ನು ಮಾರಾಟಕ್ಕೆ ಇಡಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.