

ಗಂಗಾವತಿ: ರಾಜ್ಯದಲ್ಲಿನ ಪಡಿತರ ವ್ಯವಸ್ಥೆ ಅಧ್ಯಯನಕ್ಕಾಗಿ ಕೇರಳ ಸರ್ಕಾರದ ಪ್ರತಿನಿಧಿಗಳ ತಂಡ ನಗರಕ್ಕೆ ಶನಿವಾರ ಭೇಟಿ ನೀಡಿದ್ದು, ಪಡಿತರದಾರರಿಂದ ಮಾಹಿತಿ ಪಡೆದುಕೊಂಡಿತು.
ಪಡಿತರ ವಿತರಣೆಗೆ ರಾಜ್ಯ ಸರ್ಕಾರ ಹಲವು ವರ್ಷಗಳ ಹಿಂದೆಯೇ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅರ್ಹರಿಗೆ ತಲುಪಲು ಡಿಜಿಟಲ್ ಸ್ಪರ್ಶ ನೀಡಿದೆ. ಕೇರಳದಲ್ಲಿ ಪಡಿತರ ವ್ಯವಸ್ಥೆಯಿದ್ದರೂ, ಹಳೇ ಮಾದರಿಯಲ್ಲಿ ಮುಂದುವರಿಯುತ್ತಿದೆ.
ರಾಜ್ಯದ ಪಡಿತರ ವ್ಯವಸ್ಥೆ ಡಿಜಿಟಲೀಕರಣದ ಮಾಹಿತಿಗಾಗಿ ನ್ಯಾಷನಲ್ ುಡ್ ಸೆಕ್ಯೂರಿಟಿ ಮೌಲ್ಯಮಾಪನ ವಿಭಾಗದಿಂದ ಡಾ.ಮಂಜು ಎನ್. ನಾಯ್ಕ ನೇತೃತ್ವದ ತಂಡ ಪಂಪಾನಗರದ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿಯ ಪಡಿತರ ವಿತರಣಾ ಘಟಕಕ್ಕೆ ಭೇಟಿ ಪರಿಶೀಲಿಸಿತು.
ಪಡಿತರ ಪಡೆಯಲು ಬಂದಿದ್ದ ಲಾನುಭವಿಗಳನ್ನು ವಿಚಾರಿಸಿದ ತಂಡ, ಪಡಿತರ ಉಪಯೋಗದ ಬಗ್ಗೆ ಮಾಹಿತಿ ಪಡೆದುಕೊಂಡಿತು. ಎಪಿಎಲ್, ಬಿಪಿಎಲ್, ಅಂತ್ಯೋದಯದಲ್ಲಿನ ಭಿನ್ನತೆ, ಪಡಿತರದ ವೈಯಕ್ತಿಕ ವಿವರ, ಇಲಾಖೆ ನೀಡುತ್ತಿರುವ ಅಕ್ಕಿ, ಜೋಳ ಕುರಿತು ಅಭಿಪ್ರಾಯ ಸಂಗ್ರಹಿಸಿತು.
ಪಡಿತರ ತೂಕ, ಚೀಟಿಯಲ್ಲಿ ಸೇರ್ಪಡೆ ಮತ್ತು ತೆಗೆದುಹಾಕುವ ಬಗ್ಗೆ ಲಾನುಭವಿಗಳೇ ಮೊಬೈಲ್ ಮೂಲಕ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿತು. ಅನ್ನ ತಯಾರಿಸುವ ಬಗ್ಗೆಯೂ ಮಾಹಿತಿ ಪಡೆದುಕೊಂಡ ತಂಡ, ಅಕ್ಕಿ ನೀಡಿದರೆ ಒಳಿತೋ, ಖಾತೆಗೆ ಹಣ ನೀಡುವುದು ಒಳಿತೋ ಎಂಬುದರ ಬಗ್ಗೆ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿತು.
ಇನ್ನೊಂದು ತಂಡ ಕೆಲ ಮನೆಗಳಿಗೆ ತೆರಳಿ ಪಡಿತರ ವ್ಯವಸ್ಥೆ ಲಾಭ ಮತ್ತು ನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡಿತು. ಮಲಯಾಳಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಮಾಹಿತಿ ಸಂಗ್ರಹಿಸುವ ತಂಡಕ್ಕೆ ನಗರದಲ್ಲಿ ಭಾಷೆ ಸಮಸ್ಯೆ ಎದುರಾಯಿತು. ಈ ವೇಳೆ ಮಲಯಾಳಿ ಭಾಷೆ ಬಲ್ಲ ಸಣಾಪುರ ಪಡಿತರ ವಿತರಕ ಶಬ್ಬಿರ್ ನೆರವಿನೊಂದಿಗೆ ಅಭಿಪ್ರಾಯ ಸಂಗ್ರಹಿಸಿತು.