

ಬೆಳ್ತಂಗಡಿ: ಮೂಲವಿಜ್ಞಾನದಲ್ಲಿ ಪರಿಣತಿ ಗಳಿಸಿ ವೈಜ್ಞಾನಿಕ ಸಂಶೋಧನೆಯ ಮೌಲ್ಯ ಹೆಚ್ಚಿಸಬೇಕಿದೆ. ಇದರಿಂದ ವಿಜ್ಞಾನದ ಸಮಾಜಪರತೆಗೆ ಅರ್ಥಪೂರ್ಣ ಸ್ಪರ್ಶ ದೊರಕುತ್ತದೆ ಎಂದು ಬೆಂಗಳೂರಿನ ಸಿಇಎನ್‌ಎಸ್‌ನ ವಿಜ್ಞಾನಿ, ಪ್ರಾಧ್ಯಾಪಕ ಡಾ.ಸಿ.ವಿ.ಯಳಮಗ್ಗದ್ ಹೇಳಿದರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ಅಧ್ಯಯನ, ಸಂಶೋಧನಾ ವಿಭಾಗ ಮತ್ತು ರಿಸರ್ಚ್, ಡೆವಲಪ್‌ಮೆಂಟ್ ಸೆಲ್‌ನ ಸಹಭಾಗಿತ್ವದಲ್ಲಿ ಬ್ರಿಜ್ಜಿಂಗ್‌ದ ಮೆನಿ ಫೇಸಸ್ ಆಫ್ ಮ್ಯಾಟರ್ ಕುರಿತು ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಭೌತಶಾಸ್ತ್ರ ವಲಯದಲ್ಲಿ ಆಗುತ್ತಿರುವ ಹೊಸ ಪಲ್ಲಟಗಳನ್ನು ತಿಳಿದುಕೊಳ್ಳಲು ರಾಷ್ಟ್ರೀಯ ವಿಚಾರ ಸಂಕಿರಣಗಳು ಪೂರಕವಾಗುತ್ತವೆ ಎಂದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್.ಡಿ.ಎಂ ಎಜ್ಯುಕೇಷನ್ ಸೊಸೈಟಿಯ ಅಕ್ಯಾಡೆಮಿಕ್ ಸಂಯೋಜಕರಾದ ಎಸ್.ಎನ್.ಕಾಕತ್ಕರ್, ರಿಸರ್ಚ್ ಡೆವಲಪ್‌ಮೆಂಟ್ ಸೆಲ್‌ನ ನಿರ್ದೇಶಕಿ ಡಾ.ಸೌಮ್ಯ ಬಿ.ಪಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಎಸ್ ಉಪಸ್ಥಿತರಿದ್ದರು.
ಸಂಶೋಧನಾ ಪ್ರಬಂಧಗಳ ಸಾರ ಲೇಖಗಳನ್ನೊಳಗೊಂಡ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಗೋಷ್ಠಿಗಳಲ್ಲಿ ಡಾ.ವಿನಯಕುಮಾರ್ ಕೆ.ಬಿ., ಡಾ.ಅರವಿಂದ ಎಸ್., ಡಾ.ಅರ‌್ನಬ್ ದತ್ತಾ ವಿಚಾರ ಮಂಡಿಸಿದರು. ವಿವಿಧ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಲಾಪ್ರದರ್ಶನ ನೀಡಿದರು. ಎರಡು ದಿನಗಳ ಕಾರ್ಯಕ್ರಮದಲ್ಲಿ 150 ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು ಭಾಗವಹಿಸಿದ್ದರು.