'ಗುಂಟೂರು ಕಾರಂ': ಮಹೇಶ್ ಬಾಬು ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ!

Untitled design - 2023-10-25T123805.895
Published on

ಆಂಧ್ರಪ್ರದೇಶ: ಟಾಲಿವುಡ್​ ಪ್ರಿನ್ಸ್ ನಟ​ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತೊಮ್ಮೆ ಕೈಜೋಡಿಸಿದ್ದು, 'ಗುಂಟೂರು ಕಾರಂ' ಚಿತ್ರದ ಮೂಲಕ ತೆರೆ ಮೇಲೆ ಕಮಾಲ್​ ಮಾಡಲು ಸಜ್ಜಾಗಿದ್ದಾರೆ. ಸದ್ಯ ಭರದಿಂದ ಸಾಗುತ್ತಿರುವ ಚಿತ್ರೀಕರಣದ ಮಧ್ಯೆ ಇದೀಗ ಹೊಸ ಮಾಹಿತಿಯೊಂದು ಮಹೇಶ್​ ಅಭಿಮಾನಿಗಳಿಗೆ ಸಂತಸ ನೀಡಿದೆ. ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಖ್ಯಾತ ನಿರ್ದೇಶಕ ಎಂಟ್ರಿ ಕೊಟ್ಟಿರುವ ಸಂಗತಿ ಇದೀಗ ಬಹಿರಂಗವಾಗಿದೆ.

ಈ ಆಕ್ಷನ್ ಸಿನಿಮಾವನ್ನು ಜನವರಿ 12, 2024 ರಂದು ಬಿಡುಗಡೆಗೊಳಿಸಲು ಚಿತ್ರತಂಡ ಈ ಹಿಂದೆಯೇ ಘೋಷಿಸಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟ, ನಿರ್ದೇಶಕ ರಾಷ್ಟ್ರಪ್ರಶಸ್ತಿ ವಿಜೇತ ರಾಹುಲ್ ರವೀಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿದೆ.

2015 ರಲ್ಲಿ ಬಿಡುಗಡೆಯಾದ 'ಶ್ರೀಮಂತುಡು' ಚಿತ್ರದಲ್ಲಿ ಮಹೇಶ್ ಬಾಬು ಜತೆಗೆ ರಾಹುಲ್ ರವೀಂದ್ರನ್ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ 'ಗುಂಟೂರು ಕಾರಂ' ಸಿನಿಮಾದ ಮುಖೇನ ಮತ್ತೊಮ್ಮೆ ಬೆಳ್ಳಿ ಪರೆದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಮಹೇಶ್​ ಬಾಬುಗೆ ನಾಯಕಿಯರಾಗಿ ಮೀನಾಕ್ಷಿ ಚೌಧರಿ ಮತ್ತು ಶ್ರೀಲೀಲಾ ಅಭಿನಯಿಸಿದ್ದು, ಜಗಪತಿ ಬಾಬು, ಪ್ರಕಾಶ್ ರಾಜ್, ರಮ್ಯಾ ಕೃಷ್ಣನ್, ವೆನ್ನೆಲಾ ಕಿಶೋರ್ ಮುಂತಾದವರ ತಾರಾಗಣವಿದೆ.

ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜನೆಯಿದೆ. ಮತ್ತು ಮನೋಜ್ ಪರಮಹಂಸ ಅವರ ಛಾಯಾಗ್ರಹಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net