ಕೆವಿಜಿ ಬ್ಯಾಂಕ್​ಗೆ ರಾಷ್ಟ್ರೀಯ ಪುರಸ್ಕಾರ

KVG BANK AWARD FUNCTION
Published on

ಧಾರವಾಡ: ಅಟಲ್ ಪಿಂಚಣಿ ಯೋಜನೆಯ (ಎಪಿವೈ) ಅನುಷ್ಠಾನದಲ್ಲಿ 2022-23ನೇ ಸಾಲಿನಲ್ಲಿ ಉತ್ತಮ ಸಾಧನೆಗಾಗಿ ಕೆವಿಜಿ ಬ್ಯಾಂಕ್ ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಅವರಿಗೆ ಕೇಂದ್ರ ಸರ್ಕಾರದ ಹಣಕಾಸು ವಿಭಾಗದ ಕಾರ್ಯದರ್ಶಿ ಡಾ. ವಿವೇಕ ಜೋಶಿ ಪ್ರಶಸ್ತಿ ವಿತರಿಸಿದರು.

ಪ್ರಶಸ್ತಿ ಸ್ವೀಕರಿಸಿದ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ವಿಶಾಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಸೇವೆಗಳನ್ನು ತಲುಪಿಸಲು ಬ್ಯಾಂಕ್ ಆದ್ಯತೆ ನೀಡಿದೆ. ಅಟಲ್ ಪೆನ್ಶನ್ ಯೋಜನೆ ಅಸಂಘಟಿತ ಕಾರ್ವಿುಕ ವರ್ಗಕ್ಕೆ ವರದಾನವಾಗಿದ್ದು, ನಿರ್ದಿಷ್ಟಪಡಿಸಿದ ಕಂತನ್ನು ಪಾವತಿಸಿ 61ನೇ ವರ್ಷದಿಂದ ಪಿಂಚಣಿ ಪಡೆಯಬಹುದು. ಬ್ಯಾಂಕ್ ಈವರೆಗೆ 3,42,852 ಅಟಲ್ ಪಿಂಚಣಿ ಖಾತೆಗಳನ್ನು ಮಾಡಿಸಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡಲಾಗುವುದು ಎಂದರು.

ಗುರಿ ಮೀರಿ ಸಾಧನೆ

2022- 23ನೇ ಹಣಕಾಸು ವರ್ಷದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಬ್ಯಾಂಕ್​ನ ಪ್ರತಿ ಶಾಖೆಗೆ 80 ಖಾತೆಗಳ ಸರಾಸರಿಯಲ್ಲಿ 50,320 ಖಾತೆಗಳ ಗುರಿ ನೀಡಿತ್ತು. ಬ್ಯಾಂಕ್ 121ರ ಸರಾಸರಿಯಲ್ಲಿ 76,569 ಖಾತೆಗಳನ್ನು ಮಾಡಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಿದೆ ಎಂದು ತಿಳಿಸಿದರು.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ದೀಪಕ ಮೊಹಾಂತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net