ಹೀರೋ ಆದ ನಟರಂಗ ರಾಜೇಶ್; ‘ಓಬಿರಾಯನ ಕಥೆ’ಗೆ ನಾಯಕ

RAJESH
Published on

ಬೆಂಗಳೂರು: ನಟರಂಗದ ರಾಜೇಶ್ ಈಗ ಹೀರೋ ಆಗುವುದಕ್ಕೆ ಸಜ್ಜಾಗಿದ್ದಾರೆ. ರಾಜೇಶ್ ಈ ಹಿಂದೆ ಹಲವು ಚಿತ್ರಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ಮಿಂಚಿದ್ದರು. ಈಗ ಮೊದಲ ಬಾರಿಗೆ ಪೂರ್ಣಪ್ರಮಾಣದ ಹೀರೋ ಆಗುತ್ತಿದ್ದಾರೆ, ‘ಓಬಿರಾಯನ ಕಥೆ’ ಎಂಬ ಚಿತ್ರದ ಮೂಲಕ.

‘ಓಬಿರಾಯನ ಕಥೆ’ಯನ್ನು ಬರೆದು ನಿರ್ದೇಶಿಸುತ್ತಿರುವುದು ವಿನಯ್ ಶಾಸ್ತ್ರಿ. ರಂಗಭೂಮಿಯ ನಂಟಿರುವ ವಿನಯ್, ಕೆಲವು ತಿಂಗಳ ಹಿಂದೆ ಒಂದು ಕಥೆ ಮಾಡಿಕೊಂಡು, ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದರಂತೆ. ಆ ಕಥೆಗೆ ಯಾರು ಸೂಕ್ತ ಎಂದಾಗ, ಅವರಿಗೆ ಹೊಳೆದ ಮೊದಲ ಹೆಸರೇ ರಾಜೇಶ್ ಅವರದ್ದು. ಹೀರೋ ಆಗುವುದಕ್ಕೆ ರಾಜೇಶ್ ಅವರನ್ನು ಒಪ್ಪಿಸಿರುವ ವಿನಯ್, ಏಪ್ರಿಲ್​ನಿಂದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಇಲ್ಲಿ ತಾವು ಹೀರೋ ಎನ್ನುವುದಕ್ಕಿಂತ ಕಥೆಯೇ ಹೀರೋ ಎಂದು ಅಭಿಪ್ರಾಯಪಡುತ್ತಾರೆ ರಾಜೇಶ್. ‘ನನಗೆ ಟಿಪಿಕಲ್ ಕಮರ್ಷಿಯಲ್ ಹೀರೋ ಆಗುವುದಕ್ಕೆ ಇಷ್ಟವಿಲ್ಲ. ಇಲ್ಲಿ ಕಥೆಯೇ ಹೀರೋ. ಚಿತ್ರದಲ್ಲಿ ನಾನು ಫೋಟೋಗ್ರಾಫರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ರಾಜೇಶ್. ರಾಜೇಶ್ ಜೊತೆಗೆ ದತ್ತಣ್ಣ, ಚೈತ್ರಾ ಆಚಾರ್, ವೇಣು ಹಸ್ರಾಳಿ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆ. ಈ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜಿಸುವುದರ ಜೊತೆಗೆ, ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net