ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಅಭಿನಂದನಾ ಸಮಾರಂಭ

K.V. Nagaraja Murthy
Published on

ಬೆಂಗಳೂರು: ಉತ್ತಮ ಸಂಟಕನಾದವನು ಸಂದರ್ಭಕ್ಕೆ ಅನುಗುಣವಾಗಿ ಸೇವಕನಂತೆ ಹಾಗೂ ಮಾಲೀಕನಂತೆ ವರ್ತಿಸಬೇಕಾಗುತ್ತದೆ. ಈ ಗುಣ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರಲ್ಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್​ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಜಯನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಿದ್ದ 'ಕೆ.ವಿ. ನಾಗರಾಜಮೂರ್ತಿ ಅಭಿನಂದನೆ' ಸಮಾರಂಭದಲ್ಲಿ ಮಾತನಾಡಿದರು.

ಕನ್ನಡದ ಕೆಲಸಗಳಿಗೆ ನಾಗರಾಜಮೂರ್ತಿ ಸದಾ ಮುಂದಿರುತ್ತಾರೆ. ಜತೆಗೆ ನಿರಂತರವಾಗಿ ಕಲಾವಿದರ ಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ. ಬಯಸಿದ್ದರೆ ಅವರು ರಾಜಕಾರಣಿಯಾಗಿ ಗುರುತಿಸಿಕೊಳ್ಳಬಹುದಿತ್ತು. ಆದರೆ ಅವರು ತಮ್ಮ ಆಸಕ್ತಿ ಕ್ಷೇತ್ರವಾದ ಕಲೆ&ಸಾಹಿತ್ಯ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಇಂದು ಈ ಸ್ಥಾನಕ್ಕೇರಿದ್ದಾರೆ ಎಂದರು.

ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೆ ಜನರು ಅದಕ್ಕೆ ಅವಕಾಶ ನೀಡದೆ ಬಹುತ್ವದ ಚಿಂತನೆ ಬೆಳೆಸಿಕೊಳ್ಳಬೇಕು. ಉನ್ನತ ಸ್ಥಾನಕ್ಕೆ ಹೋದಂತೆ ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.

ನಾಟಕ ಅಕಾಡೆಮಿ ವತಿಯಿಂದ ನಿರಂತರ ಚಟುವಟಿಕೆಗಳನ್ನು ನಡೆಸಲು ಚಿಂತಿಸಲಾಗಿದೆ. ಮುಂದಿನ ದಿನಗಳಲ್ಲಿ 'ಶರಣ ನಾಟಕೋತ್ಸವ' ಹಾಗೂ 'ಶರಣ ನಾಟಕ ರಚನಾ ಸ್ಪರ್ಧೆ'ಗಳು ಆಯೋಜಿಸುವ ಉದ್ದೇಶವಿದೆ. ಎಲ್ಲರ ಜೊತೆಗೂಡಿ ಶರಣ ಸಂದೇಶವನ್ನು ನಾಡಿಗೆ ಪಸರಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ವಿಮರ್ಶಕಿ ಡಾ.ಎಂ.ಎಸ್​. ಆಶಾದೇವಿ, ಕದಳಿ ಮಹಿಳಾ ವೇದಿಕೆ ಅಧ್ಯೆ ಪ್ರಮೀಳಾ ಗರಡಿ, ಪರಿಷತ್ತಿನ ಖಜಾಂಚಿ ಸದಾಶಿವಪ್ಪ, ನಾಗರಾಜಮೂರ್ತಿ ಪತ್ನಿ ಎಸ್​.ಜಿ. ತುಂಗಾ ರೇಣುಕಾ ಇತರರಿದ್ದರು.

ನಡೆ-ನುಡಿ ಒಂದಾಗಿರುವುದು ಶರಣರ ತತ್ವ. ಇದು ಜಾತಿ-ಪಂಥದ ತತ್ವವಲ್ಲ. ಆ ತತ್ವವನ್ನು ರಂಗಭೂಮಿ ಹಾಗೂ ರಂಗಭೂಮಿಯೇತರ ಸಂಸ್ಥೆಗಳಲ್ಲಿ ನಾಗರಾಜಮೂರ್ತಿ ಸದಾ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ಹೀಗಾಗಿ ಅವರು ಶರಣ ತತ್ವದ ಜ್ಯೋತಿ ಎಂದರೆ ತಪ್ಪಲ್ಲ.

-ಎಚ್​.ಎಸ್​. ಶಿವಪ್ರಕಾಶ್​, ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net