ಜ.11ರಂದು ಉಳ್ಳಾಲ ನರಿಂಗಾನ ಕಂಬಳೋತ್ಸವ

What_is_Kambala_fac1d15b00
Published on


ಮಂಗಳೂರು : ನರಿಂಗಾನ ಕಂಬಳ ಸಮಿತಿ ವತಿಯಿಂದ ನರಿಂಗಾನ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ ಜ.11ರಂದು ಬೆಳಗ್ಗೆ 8.30ರಿಂದ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಯಂಕಾಲ 4.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ
ಭಾಗವಹಿಸಲಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಪಜೀರಿನಲ್ಲಿ 25 ವರ್ಷ ಕಂಬಳ ನಡೆಸಿದ, ಕೋಣದ ಯಜಮಾನ ವೆಂಕಪ್ಪ ಕಾಜವ ಮಿತ್ತಕೋಡಿ ಅವರ ಗೌರವಾಧ್ಯಕ್ಷತೆಯಲ್ಲಿ ಅವರ ಪುತ್ರ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ ಕಾರ್ಯಧ್ಯಕ್ಷತೆಯಲ್ಲಿ ಎರಡು ವರ್ಷ ನಡೆದ ಕಂಬಳ
ಅಭೂತಪೂರ್ವ ಯಶಸ್ಸು ದಾಖಲಿಸಿದೆ ಎಂದರು. ಕಂಬಳ ಕೋಣಗಳ ಯಜಮಾನ ದಿವಂಗತ ಸುಧಾಕರ ಆಳ್ವ ಮೋರ್ಲ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ ಕೋಣದ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು. ವಿಜೇತ ಕೋಣಗಳನ್ನು ಓಡಿಸಿದ ಓಟಗಾರರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಂಬಳೋತ್ಸವ ಉದ್ಘಾಟಿಸಲಿದ್ದಾರೆ. ಶಾಂತಿಪಳಿಕೆ ಕ್ಷೇತ್ರದ ಪ್ರಧಾನ ತಂತ್ರಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ದ್ವೀಪ ಪ್ರಜ್ವಲನೆ ಮಾಡಲಿದ್ದಾರೆ. ಸಮಾರೋಪದ ಸಮಾರಂಭದಲ್ಲಿ
ಚಲನಚತ್ರ ನಟರಾದ ಸುನಿಲ್ ಶೆಟ್ಟಿ, ರೂಪೇಶ್ ಶೆಟ್ಟಿ, ಅರವಿಂದ್ ಬೋಳಾರ್, ಪ್ರದೀಪ್ ಆಳ್ವ ಕದ್ರಿ, ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಸೂರಜ್ ಶೆಟ್ಟಿ , ಮಂಜು ರೈ ಅವರನ್ನು ಸನ್ಮಾನಿಸಲಾಗುವುದು. ಜ.13ರಂದು ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ನತ್ಯ ವೈಭವ, ನಾನಾ ಸ್ಪರ್ಧೆಗಳ ಸಹಿತ ನರಿಂಗಾನ ಗ್ರಾಮೋತ್ಸವ ನಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net