ಬೆಂಗಳೂರು: ದಿಶಾಭಾರತ್ ಸಂಸ್ಥೆಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ‘ನನ್ನ ಭಾರತ’ ರಾಷ್ಟ್ರಮಟ್ಟದ ಯುವ ಆನ್ಲೈನ್ ಅಭಿಯಾನ ಯಶಸ್ವಿಯಾಗಿ ಮುಕ್ತಾಯವಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಆ.1 ರಿಂದ 15ರ ವರೆಗೆ ನಡೆದ ಅಭಿಯಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸ ಸರಣಿ, ಕಾಲೇಜುಗಳಲ್ಲಿ ಸ್ವರಾಜ್ಯ ಶೀರ್ಷಿಕೆ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಪುಸ್ತಕ ಪರಿಚಯ, ಅಂತರ ಕಾಲೇಜು ಸ್ಪರ್ಧೆಗಳು ನಡೆದವು.
ದಿಶಾ ಭಾರತ್, ಎಮ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ದಿ ಮಿಥಿಕ್ ಸೊಸೈಟಿ ಸಹಯೋಗದೊಂದಿದೆ ಅಂತರ ಕಾಲೇಜು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸುಮಾರು 42 ಕಾಲೇಜುಗಳಿಂದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ನವೀನ್ ನಾಗಪ್ಪ ಆಗಮಿಸಿ ಕಾರ್ಗಿಲ್ ಯುದ್ಧದ ರೋಚಕ ಘಟನೆಗಳನ್ನ ವಿವರಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿಧ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ಮತ್ತು ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಮಿಥಿಕ್ ಸೊಸೈಟಿ ಉಪಾಧ್ಯಕ್ಷೆ ಪ್ರೊ.ವಿ. ಅನುರಾಧ, ಎಮ್.ಇ.ಎಸ್ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್‌ನ ಪ್ರೊ.ಶೀಲಾ ಮೆನನ್, ಪ್ರಾಂಶುಪಾಲೆ ಡಾ.ಎಸ್.ಶಾರದ, ದಿಶಾ ಭಾರತ್‌ನ ರೇಖಾ ರಾಮಚಂದ್ರನ್ ಉಪಸ್ಥಿತರಿದ್ದರು.
ಆ.9 ರಿಂದ 15 ರ ವರೆಗೆ 7 ದಿನಗಳು ವಿವಿಧ ವಿಷಯಗಳ ಕುರಿತು ನಡೆದ ಉಪನ್ಯಾಸದಲ್ಲಿ ಜಿ.ಬಿ. ಹರೀಶ್, ಡಾ.ವಿ ಅನುರಾಧ, ಡಾ. ಅನ್ಶು ಜೋಶಿ, ಡಾ. ಶೋಭಿತ್ ಮಾತುರ್, ಸಂದೀಪ್ ಬಾಲಕೃಷ್ಣ, ಕ್ಯಾಪ್ಟನ್ ನವೀನ್ ನಾಗಪ್ಪ ಪಾಲ್ಗೊಂಡು ಉಪನ್ಯಾಸ ನೀಡಿದರು. ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಪನ್ಯಾಸ ನೀಡಿದರು.