ರಾಜ್ಯಾದ್ಯಂತ 88 ದಿನ ನಂದಿ ರಥಯಾತ್ರೆ
ದೇಸೀಯತೆ, ಪರಿಸರ ಉಳಿಸಲು ಜಾಗೃತಿ
ಪ್ರಶಾಂತ ಭಾಗ್ವತ, ಉಡುಪಿ
ವಿಷಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ-ಸಂಸ್ಕೃತಿ ರಕ್ಷಣೆಗಾಗಿ ಕೃಷ್ಣ (ಶ್ಯಾಮ ಕಪಿಲ) ಹಾಗೂ ಬಲರಾಮ (ಸ್ವರ್ಣ ಕಪಿಲ) ಹೆಸರಿನ ಎರಡು ನಂದಿ ಡಿ. 31ರಿಂದ ರಾಜ್ಯಾದ್ಯಂತ ನಂದಿ ರಥಯಾತ್ರೆ ಆರಂಭಿಸಿದೆ. ಮಾ.29ರ ವರೆಗೆ ಸಂಚರಿಸಿ ಪರಿಸರ ಸಂರಕ್ಷಣೆಯ ಕರೆಯೊಂದಿಗೆ ಧರ್ಮ ಜಾಗೃತಿಯನ್ನೂ ಮೂಡಿಸಲಿದೆ.
ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ (ರಿ.) ವತಿಯಿಂದ ಈ ಯಾತ್ರೆಗೆ ಬಂಟ್ವಾಳ ತಾಲೂಕಿನ ಬ್ರಹ್ಮಗಿರಿಯಲ್ಲಿ ಚಾಲನೆ ನೀಡಲಾಗಿದೆ. 88 ದಿನ ರಾಜ್ಯದೆಲ್ಲೆಡೆ ಸಂಚರಿಸಿ, ಒಂದು ಕೋಟಿ ಗೋಮಯ ಹಣತೆ ಬೆಳಗಿ ಮನ-ಮನೆ, ಪರಿಸರ ಸ್ವಚ್ಛಗೊಳಿಸಲು ಅರಿವು ಮೂಡಿಸಲಿದೆ.

ಯಾತ್ರೆಯಲ್ಲಿ ಧರ್ಮ ಜಾಗೃತಿ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿ ಜ.22ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಮಠ-ಮಂದಿರ, ಮನೆಗಳಲ್ಲಿ ಗೋಮಯ ದೀಪ ಬೆಳಗಲು ಯಾತ್ರೆಯ ಮೂಲಕ ಕರೆ ನೀಡಲಾಗುತ್ತಿದೆ. ಕನಿಷ್ಠ 108, ಗರಿಷ್ಠ 1,008 ಬಾರಿ ಶ್ರೀರಾಮ ಜಯ ರಾಮ ಜಯ ಜಯ ರಾಮ ಎಂಬ ರಾಮ ತಾರಕ ಮಂತ್ರ ಜಪಿಸಲು ಸೂಚಿಸಲಾಗುತ್ತಿದೆ. ಫೆ.27ರಂದು ಮಹಾ ಶಿವರಾತ್ರಿ ಪ್ರಯುಕ್ತ ಕನಿಷ್ಠ 108, ಗರಿಷ್ಠ 1,008 ಬಾರಿ ಶಿವನ ಕುರಿತು ಶ್ರೀ ಸಾಂಬಸದಾಶಿವಾಯ ನಮ: ಮಂತ್ರ ಜಪಿಸಲು ಜನರಿಗೆ ತಿಳಿಸಲಾಗುತ್ತಿದೆ ಎಂದು ಯಾತ್ರೆಯ ಸಂಚಾಲಕ ಪ್ರವೀಣ ಸರಳಾಯ ತಿಳಿಸಿದ್ದಾರೆ.
ನಂದಿ ಉತ್ಸವ, ಗೋಕಥೆ
ಫೆ.27ರಂದು ಮುದ್ದೇನಹಳ್ಳಿಯ ನಂದಿಗ್ರಾಮದಲ್ಲಿ ನಂದಿ ಉತ್ಸವ ಆಯೋಜಿಸಲಾಗಿದ್ದು, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಗೋಕಥೆ ನಡೆಯಲಿದೆ. ಗವ್ಯ ಉತ್ಪನ್ನಗಳ ಬಳಕೆ ಹೆಚ್ಚಿಸಲು ಯಾತ್ರೆಯ ಸಂದರ್ಭದಲ್ಲಿ 108 ಕಡೆಗಳಲ್ಲಿ ಗವ್ಯ ಉತ್ಪನ್ನ ಮಾರಾಟ ಕೇಂದ್ರ ತೆರೆಯಲಾಗುತ್ತದೆ. ಆರೋಗ್ಯಯುತ, ಸ್ವಾವಲಂಬಿ ಹಾಗೂ ಭಾರತ ವಿಶ್ವಗುರು ಆಗುವತ್ತ ‘ನಂದಿ ರಥಯಾತ್ರೆ’ಯ ಚಿಕ್ಕ ಕೊಡುಗೆಯಾಗಿದೆ ಎಂದು ಯಾತ್ರೆಯ ಪ್ರಧಾನ ಕಾರ್ಯದರ್ಶಿ ನವೀನ್ ಮಾರ್ಲ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಸಮಾರೋಪ
ರಾಜ್ಯಾದ್ಯಂತ ಸಂಚರಿಸಿ ಮಾರ್ಚ್ 29ರಂದು ರಥಯಾತ್ರೆಯು ಮಂಗಳೂರಿಗೆ ಆಗಮಿಸಲಿದೆ. 9 ದಿನ ರಾಮನವಮಿ ಉತ್ಸವ ಆಚರಿಸಿ ನಂದಿ ರಥಯಾತ್ರೆ ಸಂಪನ್ನಗೊಳ್ಳಲಿದೆ. ದೇಸೀಯತೆ ಸಂರಕ್ಷಣೆಗಾಗಿ, ಋಣಮುಕ್ತ ಭಾರತಕ್ಕಾಗಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಯಾತ್ರೆಯ ಗೌರವಾಧ್ಯಕ್ಷ, ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸದ್ಗುರು ಮಧುಸೂದನ ಸಾಯಿ ವಿಜಯವಾಣಿಗೆ ತಿಳಿಸಿದ್ದಾರೆ.
ಗೋಮಾತೆ ಮಹಿಮೆಯ ಅರಿವು
ರೋಗಮುಕ್ತ ಭಾರತಕ್ಕಾಗಿ ಪಂಚಗವ್ಯ ಉತ್ಪನ್ನಗಳ ಬಳಕೆ ಹಾಗೂ ಚಿಕಿತ್ಸೆಯ ತಿಳಿವಳಿಕೆ ನೀಡುವುದು ಯಾತ್ರೆಯ ಸಂಕಲ್ಪವಾಗಿದೆ. ವಿದೇಶಿ ತಳಿಗಳ ಬದಲಾಗಿ ದೇಸೀಯ ಗೋತಳಿ ಸಾಕುವುದು, ಗೋಮಾತೆಯ ಮಹಿಮೆ, ಭೂಮಾತೆ ಹಾಗೂ ಗೋಮಾತೆಗೆ ಇರುವ ಸಂಬಂಧ ತಿಳಿಸಿವುದು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ಲಭಿಸುವಂತಾಗಲು, ಸಹಜ ಕೃಷಿ ವಿಸ್ತರಣೆ, ಮಣ್ಣು ಉಳಿಸುವ ನಂದಿ ಕೃಷಿಕರ ಸಂಖ್ಯೆ ಹೆಚ್ಚಿಸುವುದು, ದೇಸೀಯ ಬೀಜ ರಕ್ಷಣೆ, ಸಾಮಾಜಿಕ ಸಾಮರಸ್ಯ, ಉದ್ಯೋಗ ಸೃಷ್ಟಿಯೊಂದಿಗೆ ಭಾರತೀಯ ಕುಟುಂಬ ಪದ್ಧತಿ ಸಂರಕ್ಷಿಸುವುದು ಉದ್ದೇಶವಾಗಿದೆ ಎಂದು ಯಾತ್ರೆಯ ಅಧ್ಯಕ್ಷ ಬೆಂಗಳೂರಿನ ಮಹೇಂದ್ರ ಎಂ. ತಿಳಿಸಿದ್ದಾರೆ.
ಸ್ವಾರ್ಥಕ್ಕಾಗಿ ಪ್ರಕೃತಿಯ ದುರುಪಯೋಗ ಆಗುತ್ತಿದೆ. ಎಲ್ಲರೂ ಅವಿಕ್ರಾಂತರಾಗಿದ್ದು, ಪ್ರಕೃತಿಯೂ ವಿರೋಧ ದಿಕ್ಕಿನಲ್ಲಿ ಸಾಗುತ್ತಿದೆ. ಇದು ಭೂಮಿಯಷ್ಟೇ ಅಲ್ಲ, ತಪೋಭೂಮಿ. ಹೀಗಾಗಿ ಭೂಮಾತೆ, ಗೋಮಾತೆ, ಸ್ತ್ರೀ ಜ್ಞಾನ ಜಾಗೃತಿಗಾಗಿ ಹಾಗೂ ರಾಷ್ಟ್ರೀಯತೆಯ ರಕ್ಷಣೆಗಾಗಿ ನಂದಿ ರಥಯಾತ್ರೆ ನಡೆಸುತ್ತಿದ್ದೇವೆ. ಭೂ ಸಂಪತ್ತು, ಜಲ, ವನ ಹಾಗೂ ಪಶು ಸಂಪತ್ತು ಸಂರಕ್ಷಿಸುವುದೇ ಈ ಯಾತ್ರೆಯ ಪ್ರಮುಖ ಸದುದ್ದೇಶ.
| ಭಕ್ತಿಭೂಷಣ ದಾಸ್ ಗುರೂಜಿ. ರಾಧಸುರಭಿ ಗೋಮಂದಿರ, ಬ್ರಹ್ಮಗಿರಿ, ಬಂಟ್ವಾಳ