

ವಿಜಯವಾಣಿ ಸುದ್ದಿಜಾಲ ನಂದಗುಡಿ
ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವದ ಜತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿಭಾ ಕಾರಂಜಿ ಪೂಕರವಾಗಿದೆ ಎಂದು ಪ್ರಾಂಶುಪಾಲ ಸಿದ್ದರಾಮಯ್ಯ ತಿಳಿಸಿದರು.
ನಂದಗುಡಿಯ ಕೆಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರಂಜಿಯಲ್ಲಿ ಎಲ್ಲ ಮಕ್ಕಳು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತಾಗಬೇಕು. ಬಹುತೇಕರು ಕೀಳರಿಮೆಯಿಂದ ಹಿಂದುಳಿದಿರುತ್ತಾರೆ. ಅಂತಹವರನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಮಾತ್ರ ಹೊಸ ಪ್ರತಿಭಾವಂತರು ಬೆಳಕಿಗೆ ಬರಲು ಸಾಧ್ಯ ಎಂದರು.
ಉದ್ಯಮಿ ಕಲ್ಕೆರೆ ಕೆ.ಎಸ್.ಮಹದೇವಯ್ಯ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ಇದು ಕೇವಲ ಒಂದು ತಿಂಗಳ ಕಾರ್ಯಕ್ರಮವಾಗಬಾರದು. ಶಾಲಾ ಹಂತದಲ್ಲಿ ಸೂಕ್ತ ಮಾರ್ಗದರ್ಶನ, ನಿರಂತರ ಅಭ್ಯಾಸ, ಸ್ಪರ್ಧೆ ಆಯೋಜಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ್ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವಕ್ಕೆ ಪ್ರತಿಭಾ ಕಾರಂಜಿ ಸಹಾಯಕವಾಗುತ್ತದೆ ಎಂದರು.
ನಂದಗುಡಿ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ 18 ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮುನಿಶಾಮಯ್ಯ, ಸಿಆರ್‌ಪಿ ನಂದೀಶ್ ಕುಮಾರ್, ಮುಖ್ಯಶಿಕ್ಷಕ ಡಿ.ಕೃಷ್ಣಪ್ಪ ಇತರರು ಇದ್ದರು.