ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ನಮೋ ವಿದ್ಯಾನಿಧಿ’ ಯೋಜನೆ ಆರ್ಥಿಕವಾಗಿ ಸಹಕಾರಿಯಾಗುತ್ತಿರುವುದು ವಿಶೇಷವಾದದ್ದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬನಶಂಕರಿ 2ನೇ ಹಂತದಲ್ಲಿರುವ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ನಮೋ ವಿದ್ಯಾನಿಧಿ ಸ್ಕಾಲರ್ಶಿಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಜನೆಯಡಿ ಈಗಾಗಲೇ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಗುರಿ ಹೊಂದಲಾಗಿದೆ. ಆರ್ಥಿಕ ಮತ್ತು ವೈಯಕ್ತಿಕವಾಗಿ ಸಾಕಷ್ಟು ಸವಾಲು ಎದುರಿಸುತ್ತಿರುವ ಕುಟುಂಬಗಳನ್ನು ಸಶಕ್ತಗೊಳಿಸುವ ಕಾರ್ಯ ನಿರಂತವಾಗಿದೆ. ಯೋಜನೆಯ ಫಲಾನುಭವಿಗಳಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳು ಒಂಟಿ ಪಾಲಕರಿಂದ ಬೆಳೆದ ಮಕ್ಕಳಾಗಿರುವುದು ಗಮನಾರ್ಹ ಎಂದರು.
ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯ ಅಭಿವೃದ್ದಿಪಡಿಸಿಕೊಳ್ಳುವ ಮನಸ್ಥಿತಿ ಅಳವಡಿಸಿಕೊಳ್ಳಬೇಕು.ಕನಸು ಈಡೇರಿಸಿಕೊಳ್ಳುವಾಗ ಬಲವಾದ ಇಚ್ಛಾಶಕ್ತಿ ಅತ್ಯಗತ್ಯ.ಅದರ ಕೀಲಿಕೈಗಳು ನಮ್ಮ ಕೈಯಲ್ಲಿವೆ. ಕುಟುಂಬದ ಆರ್ಥಿಕ ಅಥವಾ ವೈಯಕ್ತಿಕ ಕ್ಲಿಷ್ಟಕರ ಸನ್ನಿವೇಶ ಎದುರಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು. ಪ್ರತಿ ವಿದ್ಯಾರ್ಥಿಯು ಶಿಕ್ಷಣದಿಂದ ಬದಲಾವಣೆ ಕ್ರಾಂತಿ ಮಾಡುಬಹುದು. ಇಂತಹ ಯುವ ಮತ್ತು ಮಹತ್ವಾಕಾಂಕ್ಷೆ ಮನಸ್ಸುಗಳಿಂದ ನಮ್ಮ ಕ್ಷೇತ್ರದ ಭವಿಷ್ಯವನ್ನು ರೂಪಿಸಲಾಗುತ್ತದೆ. ಅಂತಹ ಬದಲಾವಣೆ ತರುವಂತಹ ಗುಣ ಮಕ್ಕಳಲ್ಲಿದೆ ಎಂದರು.
ಆಟೋ,ಟ್ಯಾಕ್ಸಿ ಚಾಲಕರ ಮಕ್ಕಳು,ದೈನಂದಿನ ಕೂಲಿ ಕಾರ್ಮಿಕರ ಕುಟುಂಬ ಮಕ್ಕಳು ಸೇರಿ 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪಡೆದರು. ಬಿಬಿಎಂಪಿ ಮಾಜಿ ಸದಸ್ಯರಾದ ಎ.ಎಚ್.ಬಸವರಾಜು, ಲಕ್ಷ್ಮಿಕಾಂತ್ ಸೇರಿ ಮತ್ತಿತರರಿದ್ದರು.