

ಮಂಡ್ಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆಗೆ ಇರುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಪರಿಹರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದರು. ದಾನಿಯೊಬ್ಬರು 25 ಲಕ್ಷ ರೂ ವೆಚ್ಚದಲ್ಲಿ ಪ್ರತಿಮೆ ಮಾಡಲು ಸಿದ್ದವಿದ್ದೇವೆ ಎಂದಿದ್ದಾರೆ. ಅದರ ಲೀಗಲ್ ಸಮಸ್ಯೆ ಶೀಘ್ರವೇ ಬಗೆಹರಿಸುತ್ತೇವೆ. ನೂರಕ್ಕೆ ನೂರರಷ್ಟು ಪ್ರತಿಮೆಯವನ್ನು ಆದಷ್ಟು ಬೇಗ ಮಾಡುತ್ತೇವೆ. ಅದರ ಬಗ್ಗೆ ಅನುಮಾನ ಬೇಡ ಎಂದರು.
ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಮೈಸೂರು ಪ್ರಾಂತ್ಯದ ದೈವ ಸ್ವರೂಪರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯತ್ ಜಯಂತಿ ಉದ್ಘಾಟನೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ದೇಶದಲ್ಲಿ ಆನೇಕ ರಾಜರು ಆಳ್ವಿಕೆ ಮಾಡಿದ್ದಾರೆ. ಮೈಸೂರು ಪ್ರಾಂತ್ಯದ ರಾಜರಾದ ನಾಲ್ವಡಿ ಅವರ ಹೆಸರು ಇಂದಿಗೂ ಅಚ್ಚಳಿಯದೇ ಉಳಿದಿದೆ. ಅದಕ್ಕೆ ಕಾರಣ ಅವರು ಮಾಡಿದ ಜನಪರ ಕೆಲಸಗಳು. ನಾಲ್ವಡಿ ಅವರ ಚಿಂತನೆಗಳ ಫಲವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೇ ಕರ್ನಾಟಕ ರಾಜ್ಯದ ಜನರು ಉತ್ತಮ ಮೂಲ ವ್ಯವಸ್ಥೆಗಳೊಂದಿಗೆ ಜೀವನ ನಡೆಸಿತ್ತಿದ್ದಾರೆ ಎಂದರು.
ನಾಲ್ವಡಿ ಅವರು ಶಾಲಾ, ಕಾಲೇಜು, ನೀರಾವರಿ, ಕಾರ್ಖಾನೆಗಳು, ರೈಲ್ವೆ ವ್ಯವಸ್ಥೆಯನ್ನು ಮಾಡಿ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದರು. ದೇವದಾಸಿ, ಬಸವಿ ಪದ್ಧತಿಯಂತಹ ಸಮಾಜದ ಪಿಡುಗನ್ನು ತೊಡದು ಹಾಕಿದರು. ನಾಲ್ವಡಿ ಅವರ ಸಾಧನೆಗಳು ಅಪಾರ. ಮಂಡ್ಯ ಜಿಲ್ಲೆಯಲ್ಲಿರುವ ಕನ್ನಂಬಾಡಿ ಅಣೆಕಟ್ಟು ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಣದ ಕೊರತೆಯಿಂದ ತಮ್ಮ ಬಳಿಯಿದ್ದ ಚಿನ್ನವನ್ನು ಅಡವಿಟ್ಟರು. ಅವರ ತ್ಯಾಗವನ್ನು ಸದಾ ನೆನೆಯಬೇಕು ಎಂದರು.
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ನಾಲ್ವಡಿ ಅವರ ಕೆಲಸಗಳನ್ನು ಸ್ಮರಿಸಿ ಜನರು ಹಾಗೂ ಸರ್ಕಾರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯ. ಅವರ ಕಾಲದಲ್ಲಿ ನಿರ್ಮಾಣವಾದ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಿ. ಅವರ ಜಯಂತಿಯಂದು ರಕ್ತದಾನ ಶಿಬಿರ ನಡೆಸುತ್ತಿರುವುದಯ ಶ್ಲಾಘನೀಯ ಕೆಲಸ. ಇಂತಹ ಸಮಾಜಮುಖಿ ಕೆಲಸಗಳ್ು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಇತಿಹಾಸಕಾರ ಎ.ಎಸ್.ಧಮೇಂದ್ರಕುಮಾರ್ ಮಾತನಾಡಿ, ರಾಜರ ಕಾಲದಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ವಯಸ್ಕರಿಗೆ ಶಿಕ್ಷಣಕ್ಕಾಗಿ ರಾತ್ರಿ ವೇಳೆ ಶಿಕ್ಷಣವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೊದಲ ಬಾರಿಗೆ ಜಾರಿಗೆ ತಂದವರು. ದೇಶಕ್ಕೆ ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯನ್ನು ಪರಿಚಯಿಸಿಕೊಟ್ಟರು ಎಂದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಕನ್ನಂಬಾಡಿ ಅಣೆಕಟ್ಟೆ ಕಟ್ಟಿ ಮಂಡ್ಯ ಜಿಲ್ಲೆಯ ಕೃಷಿಗೆ ನೀರನ್ನು ಹಾಗೂ ಮೈಷುಗರ್ ಕಾರ್ಖಾನೆ ನಿರ್ಮಿಸಿ ಸಕ್ಕರೆ ನಾಡು ಹೆಸರನ್ನು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಇಡುವಂತೆ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಶಾಸಕ ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ವಿವಿಧ ಸಂಘಟನೆಗಳ ಮುಖ್ಯಸ್ಥರಾದ ಮೀರಾ ಶಿವಲಿಂಗಯ್ಯ, ತಗ್ಗಹಳ್ಳಿ ವೆಂಕಟೇಶ್, ನಟರಾಜ್, ಲಂಕೇಶ್ ಇತರರಿದ್ದರು.