

ಮಂಡ್ಯ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕೇವಲ 5 ಅಡಿ ಎತ್ತರವಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಅನನ್ಯ. ಕೇವಲ 11 ವರ್ಷಕ್ಕೆ ಪಟ್ಟಕ್ಕೆ ಬಂದ ನಾಲ್ವಡಿ ಅವರು ತಮ್ಮ ತಾಯಿಯ ಆಸರೆಯಲ್ಲಿ ರಾಜ್ಯಭಾರ ಮಾಡಿದರು. ಬಳಿಕ ಸ್ವತಂತ್ರವಾಗಿ ಆಳ್ವಿಕೆ ಮಾಡಿ ಸಾಧನೆಯ ಮೈಲಿಗಲ್ಲುಗಳನ್ನು ಸ್ಥಾಪಿಸಿದರು. ಇದರಿಂದ ಬ್ರಿಟಿಷರು ಮತ್ತು ವಿದೇಶಗಳಿಂದಲೂ ಗೌರವಕ್ಕೆ ಪಾತ್ರರಾಗಿದ್ದರು ಎಂದು ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ನಿರ್ದೇಶಕ ಡಾ.ನಾಗರಾಜು ಭೈರಿ ಬಣ್ಣಿಸಿದರು.
ನಗರದ ಎಸ್.ಡಿ.ಜಯರಾಂ ನರ್ಸಿಂಗ್ ಕಾಲೇಜಿನಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಮತ್ತು ಅಮೃತ ಅಲಯನ್ಸ್ ಕ್ಲಬ್ ಮಂಡ್ಯ ಜಿಲ್ಲೆ-268ಎಸ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಾತಃಸ್ಮರಣೀಯರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಅವರು ಮಾಡದ ಜನಸೇವಾ ಕೆಲಸಗಳಿಲ್ಲ ಎಂದರು.
ಮೀಸಲು ವ್ಯವಸ್ಥೆಯನ್ನು ಜಾರಿಗೊಳಿಸಿದ ದಿಟ್ಟ ವ್ಯಕ್ತಿ. ಮಿಂಟೋ ಕಣ್ಣಿನ ಆಸ್ಪತ್ರೆ, ಕಾಗದ ಕಾರ್ಖಾನೆ, ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಕ್ಷಯ ರೋಗ ಆಸ್ಪತ್ರೆ ಸ್ಥಾಪಿಸಿದರು. ಶಾಲೆಗಳ ಪ್ರವೇಶಕ್ಕಿದ್ದ ಜಾತಿ ಪದ್ಧತಿಯನ್ನು ರದ್ದುಗೊಳಿಸಿದರು. ಅಂಧರು ಮತ್ತು ಕಿವುಡರಿಗಾಗಿ ವಿಶೇಷ ಶಾಲೆ ತೆರೆದರು. 270ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ನಿರ್ಮಿಸಿದರು ಎಂದು ವಿವರಿಸಿದರು.
ಆರ್ಎಫ್ಒ ಚೈತ್ರಾ ಮಾತನಾಡಿ, ಜನರಿಗೆ ಮೀಸಲು ವ್ಯವಸ್ಥೆ ಇರುವಂತೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲು ಅರಣ್ಯವನ್ನು ಸೃಷ್ಟಿಸಿದರು. ಪರಿಸರ ಮತ್ತು ಕಾಡು ಸಂರಕ್ಷಣೆ ಬಗ್ಗೆ ನಾಲ್ವಡಿ ಅವರು ಶತಮಾನದ ಹಿಂದೆಯೇ 1918ರಲ್ಲೇ ಆಲೋಚಿಸಿದ್ದರು. ರಾಸುಗಳಿಗಾಗಿ ಗೋಮಾಳ, ಅಮೃತ ಮಹಲ್ ಕಾವಲ್ ಹೆಸರಿನಲ್ಲಿ ಜಮೀನುಗಳನ್ನು ಮೀಸಲಿಟ್ಟಿದ್ದರು. ಅವರ ಆಶಯಗಳನ್ನು ನಾವು ಮುಂದುವರೆಸಬೇಕಿದೆ. ಇದಕ್ಕಾಗಿ ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಅವರು ಕಾಲೇಜು ಆವರಣದಲ್ಲಿ ಗಿಡ ನೆಟ್ಟು ನೀರೆರೆದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಎಸ್.ಶ್ರುತಿ, ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಅಮೃತ ಅಲಯನ್ಸ್ ಕ್ಲಬ್ನ ಅಧ್ಯಕ್ಷ ಎಂ.ಲೋಕೇಶ್, ಕಾರ್ಯದರ್ಶಿ ಚಂದ್ರಶೇಖರ್, ಗಾಯಕ ಡೇವಿಡ್ ಇತರರಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.