

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ
ಏಷ್ಯಾದಲ್ಲಿಯೇ ಬೆಂಗಳೂರಿನಲ್ಲಿ ಮೊದಲ ವಿದ್ಯುತ್ ದೀಪ ಬೆಳಗಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಕೇವಲ ಒಣ ಬೇಸಾಯ ಅವಲಂಬಿಸಿ ಕೃಷಿಯಲ್ಲಿ ಹಿಂದುಳಿದಿದ್ದ ಭೂಮಿಯನ್ನು ಕೆ.ಆರ್.ಎಸ್ ಜಲಾಶಯದ ಮೂಲಕ ಸಂಪತ್ಭರಿತ ನಾಡನ್ನಾಗಿ ಪರಿವರ್ತಿಸಿದವರು ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಾಗಣ್ಣ ಡಿ.ಎ ನುಡಿದರು.
ನೆಲ್ಯಾಡಿಯ ವಿಶ್ವವಿದ್ಯಾಲಯ ಘಟಕ ಕಾಲೇಜಿನ ಕನ್ನಡ ಮತ್ತು ಇತಿಹಾಸ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಬುಧವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜಯಂತ್ಯುತ್ಸವ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಸೀತಾರಾಮ ಪಿ. ಉದ್ಘಾಟಿಸಿದರು. ಕಡಬ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸೇಸಪ್ಪ ರೈ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಬಹುಮುಖಿ ವ್ಯಕ್ತಿತ್ವದ ಕ್ರಿಯಾಶೀಲ ಕಾರ್ಯಗಳು ಇಂದಿನ ವಿದ್ಯಾರ್ಥಿಗಳಲ್ಲಿ ಮರುಹುಟ್ಟು ಪಡೆದುಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಉದ್ಯಮಿ ಸತೀಶ್ ದುರ್ಗಾಶ್ರೀ ಉಪಸ್ಥಿತರಿದ್ದರು. ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ನೂರಂದಪ್ಪ ಸ್ವಾಗತಿಸಿದರು. ಭವ್ಯಶ್ರೀ, ಭಾರತಿ ತಂಡ ನಾಡಗೀತೆ ಪ್ರಸ್ತುತಪಡಿಸಿದರು. ಉಪನ್ಯಾಸಕಿ ಪಾವನಾ ರೈ ವಂದಿಸಿದರು. ಚಂದ್ರಕಲಾ ಬಿ. ಕಾರ್ಯಕ್ರಮ ನಿರ್ವಹಿಸಿದರು. ಸಂತ ಜಾರ್ಜ್ ವಿದ್ಯಾಸಂಸ್ಥೆಯ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.