ಸಿಎಂ ಬದಲಾವಣೆ ಆಡಿಯೋ ಸಂದೇಶ ತನಿಖೆಗೆ ರಮಾನಾಥ ರೈ ಒತ್ತಾಯ

rai_250717-1
Published on

ಮಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ವೈರಲ್ ಆಗಿರುವ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಧ್ವನಿಯ ಆಡಿಯೋ ಸಂದೇಶದ ಸತ್ಯಾಸತ್ಯತೆ ಕುರಿತು ಕೂಡಲೇ ತನಿಖೆ ನಡೆಸಿ ವಾಸ್ತವ ಜನರ ಮುಂದಿಡುವಂತೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ರಮಾನಾಥ ರೈ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಮತ್ತು ಸೈಬರ್ ಕ್ರೈಂ ಬಗ್ಗೆ ಆಳವಾದ ಪರಿಣತಿ ಇರುವ ಮಂಗಳೂರು ಪೊಲೀಸ್ ಆಯುಕ್ತರು ವೈರಲ್ ಆಗಿರುವ ಧ್ವನಿ ಯಾರದು ಎಂದು ಪತ್ತೆಹಚ್ಚಲು ಸಮರ್ಥರಿದ್ದಾರೆ ಎಂದು ಹೇಳಿದರು.
ಗರ್ಭಿಣಿಯರು ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ‘ಮಾತೃಪೂರ್ಣ’ ಯೋಜನೆಯಡಿ ಮೊಟ್ಟೆ ವಿತರಿಸುವ ಟೆಂಡರ್ ಹಂಚಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾಜೊಲ್ಲೆ ಅವರು ಕಿಕ್‌ಬ್ಯಾಕ್ ಪಡೆಯಲು ಮುಂದಾದ ಹಗರಣದ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣಗಳು ಮಾತ್ರ ಬೆಳಕಿಗೆ ಬರುತ್ತವೆ. ತನಿಖೆ ನಡೆಯುವುದಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ರವೂಫ್, ಎಸ್.ಅಪ್ಪಿ, ಪುರುಷೋತ್ತಮ ಚಿತ್ರಾಪುರ, ನೀರಜ್‌ಪಾಲ್, ಸುರೇಂದ್ರ ಕಾಂಬಳಿ, ಆಶಿತ್ ಪಿರೇರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net