ನರೇಗಾ ಸಿಬ್ಬಂದಿಗೆ ಬಾಕಿ ವೇತನ ಪಾವತಿಸಲು ಸಂಸದ ಕೋಟ ಆಗ್ರಹ

udp-2-kota srinivas poojari 1
Published on

ಉಡುಪಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಉಡುಪಿ ಜಿಲ್ಲೆಯ ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ಪಾವತಿಯಾಗದೇ ಪ್ರತಿಭಟನೆ ನಡೆಸುತ್ತಿದ್ದಾರೆ. ತಂತ್ರಾಂಶ ರಹಿತವಾಗಿ ಸಾಮಾನ್ಯ ರೂಪದಲ್ಲಿ ವೇತನ ಪಾವತಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅವರಿಗೆ ಪತ್ರ ಮೂಲಕ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಜಿಪಂ ಮತ್ತು ತಾಪಂ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯಾದ್ಯಂತ 3,657 ನೌಕರರು ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರ ಸಂಪನ್ಮೂಲದ ಆಧಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 6 ತಿಂಗಳುಗಳಿಂದ ವೇತನ ಪಾವತಿಯಾಗದೇ ಇರುವುದರಿಂದ ಉಡುಪಿ ಜಿಲ್ಲೆಯಲ್ಲಿನ ಹೊರಗುತ್ತಿಗೆ ನೌಕರರು ಪ್ರತಿಭಟನೆಯನ್ನು ಪ್ರಾರಂಭಿಸಿದ್ದು, ಗ್ರಾಮ ಪಂಚಾಯತ್​ಗಳಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಯಾವುದೇ ಕಾಮಗಾರಿಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈಗಾಗಲೇ ಕೇಂದ್ರದಿಂದ ಸುಮಾರು 100 ಕೋಟಿ ರೂ. ವೇತನ ಮತ್ತು ಇನ್ನಿತರ ಆಡಳಿತ ವೆಚ್ಚಕ್ಕಾಗಿ ಬಿಡುಗಡೆಯಾಗಿದೆ. ಆದರೂ ವೇತನ ಪಾವತಿಯಾಗದಿರುವ ಬಗ್ಗೆ ಸಂಬಂಧಪಟ್ಟ ರಾಜ್ಯ ಮಟ್ಟದ ನರೇಗಾ ನಿರ್ದೇಶಕರೊಡನೆ ಸಮಾಲೋಚಿಸಿದಾಗ ನರೇಗಾ ತಂತ್ರಾಂಶ ಮತ್ತು ರಾಜ್ಯದ ಕೆ2 ತಂತ್ರಾಂಶ ಹೊಂದಾಣಿಕೆಯಾಗದೇ ಇರುವುದರಿಂದ ವೇತನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎಂಬುದಾಗಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net