ಕರಾವಳಿಯಾದ್ಯಂತ ಶ್ರದ್ಧಾ ಭಕ್ತಿಯ ನಾಗರಪಂಚಮಿ ಸುಬ್ರಹ್ಮಣ್ಯ, ಕುಡುಪು ಸಹಿತ ನಾಗಕ್ಷೇತ್ರಗಳಲ್ಲಿ ನಾಗ ದೇವರಿಗೆ ವಿಶೇಷ ಪೂಜೆ

mng-aug9-kudupu21
Published on


ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನಾಗರಪಂಚಮಿ ಪ್ರಯುಕ್ತ ಶುಕ್ರವಾರ ಪ್ರಸಿದ್ಧ ನಾಗಕ್ಷೇತ್ರ, ದೇವಾಲಯ ಹಾಗೂ ಕುಟುಂಬಗಳ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಲಕ್ಷಾಂತರ ಭಕ್ತರು ಮುಂಜಾನೆ ಕುಟುಂಬ ಮೂಲನಾಗನ ಸ್ಥಾನಕ್ಕೆ, ಸಾರ್ವಜನಿಕ ನಾಗ ಬ್ರಹ್ಮಸ್ಥಾನಕ್ಕೆ ತೆರಳಿ ಶ್ರದ್ಧಾಭಕ್ತಿಯಿಂದ ತನು ಅರ್ಪಿಸಿ, ಪ್ರಾರ್ಥಿಸಿದರು.


ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆದವು. ಮುಂಜಾನೆ 4 ರಿಂದ ರಾತ್ರಿ 10ರವರೆಗೆ ದೇವಸ್ಥಾನ ತೆರೆದಿದ್ದು, 60 ಸಾವಿರಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನ ಪಡೆದರು. ಪ್ರಾತಃಕಾಲ 3 ಗಂಟೆಯಿಂದಲೇ ಭಕ್ತರು ಸರತಿ ಸಾಲಲ್ಲಿ ನಿಂತು ನಾಗದೇವರಿಗೆ ಹಾಲಿನ ಅಭಿಷೇಕ ನೆರವೇರಿಸಿದರು. ಸಾಯಂಕಾಲದ ವೇಳೆಗೆ 12 ಸಾವಿರ ತಂಬಿಲ ಸೇವೆ, 2500 ಸಾವಿರ ಪಂಚಾಮೃತ ಅಭಿಷೇಕ, 50 ಸಾವಿರದಷ್ಟು ಸೀಯಾಳ ಅಭಿಷೇಕ ನಡೆದಿವೆ. ಭಕ್ತರಿಂದ 100 ಲೀಟರ್ ಹಾಲಿನ ಅಭಿಷೇಕ ನಡೆದಿದೆ. 20 ಸಾವಿರಕ್ಕೂ ಅಧಿಕ ಮಂದಿ ಅನ್ನದಾನದಲ್ಲಿ ಪಾಲ್ಗೊಂಡಿದ್ದಾರೆ. ಹಿಂಗಾರ, ಕೇದಗೆ, ಸಂಪಿಗೆ ಸೇರಿದಂತೆ ವಿಶೇಷ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಸಮರ್ಪಣೆಯಾಗಿವೆ ಎಂದು ದೇವಳದ ಕಚೇರಿ ಮೂಲಗಳು ತಿಳಿಸಿವೆ.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದೇವಸ್ಥಾನದಲ್ಲಿ ನಾಗದೇವರಿಗೆ ಹಾಲು, ಸಿಯಾಳಾಭಿಷೇಕ ನಡೆಯಿತು. ದೇವಳದ ಅರ್ಚಕರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿವಿಧ ಸೇವೆಗಳನ್ನು ಸಮರ್ಪಿಸಿದರು.


ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ, ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥನ ಸನ್ನಿಧಿ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಮಹಾಲಿಂಗೇಶ್ವರ, ಕಾರ್‌ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ನಾಗನಕಟ್ಟೆ, ತೋಕೂರು ಸುಬ್ರಹ್ಮಣ್ಯ ದೇವಸ್ಥಾನ ಸಹಿತ ದ.ಕ. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ ತಂಬಿಲ ಸೇವೆ, ಪೂಜೆಗಳು ನಡೆದವು. ನಾಗ ದೇವರಿಗೆ ಹಾಲೆರೆಯಲು ಬೆಳಗ್ಗೆಯಿಂದ ಮಳೆಯೂ ಬಿಡುವು ಮಾಡಿ ಕೊಟ್ಟಿತು. ಹಾಗಾಗಿ ನಗರದ ಎಲ್ಲ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net