ದಿಬ್ಬೂರು ಸಿದ್ದಲಿಂಗಪ್ಪ ಸೇವೆ ಅಪಾರ; ನಾಡೋಜ ಗೊ.ರು.ಚನ್ನಬಸಪ್ಪ ಬಣ್ಣನೆ; ಶರಣ ಸಾಹಿತ್ಯ ಪರಿಷತ್‌ನಲ್ಲಿ ಸ್ಮರಣೆ

New Project
Published on

ಬೆಂಗಳೂರು: ಶರಣ ಚಿಂತಕರು, ಮಹಾ ದಾನಿಗಳಾದ ದಿಬ್ಬೂರ್ ಸಿದ್ದಲಿಂಗಪ್ಪ ಅವರು ಬೆಂಗಳೂರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರವಾಗಿದೆ ಎಂದು ನಾಡೋಜ ಗೊ. ರು. ಚನ್ನಬಸಪ್ಪ ಅಭಿಪ್ರಾಯಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಇತ್ತೀಚೆಗೆ ಅಗಲಿದ ದಿಬ್ಬೂರ್ ಸಿದ್ದಲಿಂಗಪ್ಪ ಸ್ಮರಣೆ ಕಾರ್ಯಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಜಿ ಉಪ ರಾಷ್ಟ್ರಪತಿ ಬಿ. ಡಿ. ಜತ್ತಿ ಅವರೊಂದಿಗೆ ಬಸವ ಸಮಿತಿ ಸ್ಥಾಪಕರಾಗಿ, ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾಗಿದೆ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿದ್ದಲಿಂಗಪ್ಪ ಎರಡು ಬಾರಿ ಶರಣ ಸಾಹಿತ್ಯ ಸಮ್ಮೇಳವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದರು. ಅನೇಕ ಶರಣ ಗ್ರಂಥಗಳನ್ನು ಪ್ರಕಟಣೆ, ಜಯನಗರದಲ್ಲಿ ಶರಣೆ ಅಕ್ಕಮಹಾದೇವಿ ಪುತ್ತಳಿ ಸ್ಥಾಪನೆ ಹೀಗೆ ಅವರು ನೀಡಿದ ಸೇವೆ ಅಪರಿಮಿತವಾಗಿದೆ ಎಂದು ಸಿದ್ದಲಿಂಗಪ್ಪನವರ ಸೇವೆಯನ್ನು ಸ್ಮರಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ ಸೋಮಶೇಖರ್ ಮಾತನಾಡಿ, ಸಿದ್ದಲಿಂಗಪ್ಪ ಅವರು ಶರಣ ಸಾಹಿತ್ಯ ಪರಿಷತ್ತಿನ ಆಧಾರ ಸ್ತಂಭವಾಗಿದ್ದರು. ವೀರಶೈವ ಹಾಸ್ಟೆಲ್ನ ಅಧ್ಯಕ್ಷರಾಗಿ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿದ್ದಾರೆ.ಚೈತನ್ಯ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿ ನೂರಾರು ಬರಹಗಾರರು ಮತ್ತು ಕನ್ನಡ ಪರ ಚಿಂತಕರು ಹೊರ ಹೊಮ್ಮಲು ಕಾರಣರಾಗಿದ್ದಾರೆ. ತಮ್ಮ 90 ವರ್ಷದ ಸಾರ್ಥಕ ಬದುಕಿನುದ್ದಕ್ಕೂ ಶರಣ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಬೌತಿಕವಾಗಿ ಅವರು ನಮ್ಮನ್ನು ಅಗಲಿದ್ದರೂ ಅವರು ಮಾಡಿರುವ ಕಾರ್ಯಗಳ ಮೂಲಕ ದಿಬ್ಬೂರು ಸಿದ್ದಲಿಂಗಪ್ಪ ಅವರು ಶಾಶ್ವತವಾಗಿದ್ದಾರೆ ಎಂದರು.

ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೆ. ವಿ. ನಾಗರಾಜ ಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮತ್ತಿತರರು ಪಾಲ್ಗೊಂಡು ಸಿದ್ದಲಿಂಗಪ್ಪನವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net