More

    ಎಲ್ಲವನ್ನೂ ರಾಜಕೀಯ ಲಾಭಕ್ಕೆ ಬಳಸದಿರಿ : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸಚಿವ ಎಂಟಿಬಿ ನಾಗರಾಜ್ ಕಿಡಿ

    ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಹೊಸಕೋಟೆ


    ತಾಲೂಕಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮವನ್ನೂ ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸಬೇಡಿ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚುತ್ತದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರು ಶಾಸಕ ಶರತ್‌ಬಚ್ಚೇಗೌಡ ವಿರುದ್ಧ ಹರಿಹಾಯ್ದರು.


    ಹೊಸಕೋಟೆಯಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ರಥಯಾತ್ರೆ ಸಂದರ್ಭದಲ್ಲಿ ಸ್ವಾಮೀಜಿ ೆಟೋ ಹಾಕಿಲ್ಲ ಎಂಬ ಬಗ್ಗೆ ಶಾಸಕರ ಬೆಂಬಲಿಗರು ಕಾರ್ಯಕ್ರಮದಲ್ಲಿ ಧಿಕ್ಕಾರ ಕೂಗಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಚಿವರು ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
    ಇದೊಂದು ಸರ್ಕಾರಿ ಕಾರ್ಯಕ್ರಮ, ವಾರ್ತಾ ಇಲಾಖೆಯವರು ಎಲ್ಲವನ್ನೂ ವ್ಯವಸ್ಥೆ ಮಾಡಿದ್ದಾರೆ, ನಾವು ರಥಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಡುವುದಷ್ಟೆ ಕೆಲಸ. ಇದರಲ್ಲಿ ನಾವು ಯಾವುದೇ ರಾಜಕೀಯ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.


    ಈ ಹಿಂದಿನಿಂದಲೂ ಸಂಸದರಾಗಿರುವ ಬಚ್ಚೇಗೌಡರು ಪ್ರತಿ ಅಭಿವೃದ್ಧಿ ಕೆಲಸದಲ್ಲೂ ವಿರೋಧ ವ್ಯಕ್ತಪಡಿಸುತ್ತಿದ್ದರು, ಈಗ ಶಾಸಕರಾಗಿರುವ ಶರತ್‌ಬಚ್ಚೇಗೌಡರು ಅದೇ ಪ್ರವೃತ್ತಿ ಮುಂದುವರಿಸಿದ್ದಾರೆ. ಶಾಸಕರಾಗಿ ಇದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಹೇಳಿದರು.

    ಇದ್ದಕ್ಕಿದ್ದಂತೆ ಕಾಳಜಿ ಮುಖವಾಡ
    ತಾಲೂಕಿನಲ್ಲಿ ನಾನು ಶಾಸಕನಾಗಿದ್ದಾಗ ಒಕ್ಕಲಿಗ ಸಮುದಾಯದ ಮುಖಂಡರ ಒತ್ತಾಸೆಯಂತೆ ಹೊಸಕೋಟೆಯಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಿಸಿದ್ದೆ, ಬಚ್ಚೇಗೌಡರು ಮಂತ್ರಿಗಳಾಗಿದ್ದರು. ಆದರೆ ಅವರು ಆಡಳಿತದಲ್ಲಿದ್ದಾಗ ಯಾಕೆ ಪುತ್ಥಳಿ ಮಾಡಲಿಲ್ಲ. ಆಗ ಅವರಿಗೆ ಕಾಳಜಿ ಇರಲಿಲ್ಲವೇ ಎಂದು ಸಚಿವರು ಪ್ರಶ್ನಿಸಿದರು.

    ರಥಕ್ಕೆ ಸ್ವಾಗತ
    ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಪುತ್ಥಳಿಯನ್ನು 11 ರಂದು ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದು, ಕೆಂಪೇಗೌಡರ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸುವಂತೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ನಾಲ್ಕು ತಾಲೂಕಿನ ಕೆರೆ ಹಾಗೂ ದೇವಾಲಯದ ಆವರಣದ ಪವಿತ್ರ ಮಣ್ಣು ಸಂಗ್ರಹಿಸುವ ಕಾರ್ಯಕ್ರಮ ಇದಾಗಿದೆ ಎಂದು ಎಂಟಿಬಿ ತಿಳಿಸಿದರು.
    ಈ ರಥಯಾತ್ರೆಯು ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಮಣ್ಣು ಹಾಗೂ ಕೆರೆ ನೀರನ್ನು ಸಂಗ್ರಹಿಸುವ ಕೆಲಸ ಮಾಡಲಿದೆ. ಎಲ್ಲರೂ ಇದಕ್ಕೆ ಸ್ವಾಗತಕೋರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

    ಶಾಸಕರ ಬಹಿಷ್ಕಾರ
    ಕೆಂಪೇಗೌಡರ ಪುತ್ಥಳಿಗೆ ನಾಡಿನ ಪವಿತ್ರ ಮೃತ್ತಿಕೆ ಮತ್ತು ಜಲ ಸಂಗ್ರಹಿಸುವ ರಥದ ಚಾಲನೆ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು. ಕಾರ್ಯಕ್ರಮ ಪ್ರಾರಂಭವಾಗುವ ಸಂದರ್ಭದಲ್ಲಿ ಬೆಂಬಲಿಗರೊಂದಿಗೆ ಆಗಮಿಸಿದ ಶಾಸಕರು ಕಾರ್ಯಕ್ರಮಕ್ಕೆ ತಾಲೂಕಿನ ಒಕ್ಕಲಿಗರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಿಲ್ಲ, ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡದೆ ರಥಯಾತ್ರೆಯನ್ನು ಬಿಜೆಪಿ ಕಾರ್ಯಕ್ರಮದಂತೆ ನಡೆಸಲಾಗುತ್ತಿದೆ ಎಂದು ದೂರಿದರು.


    ರಥದಲ್ಲಿ ಒಕ್ಕಲಿಗರ ಸಮಾಜದ ಸ್ವಾಮೀಜಿಗಳ ಪೋಟೊ ಬಳಸದೆ ಕೇವಲ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಅಳವಡಿಸಿ ಜನರ ತೆರಿಗೆ ಹಣದಲ್ಲಿ ಬಿಟ್ಟಿ ಪ್ರಚಾರ ಮಾಡಿ ಒಕ್ಕಲಿಗ ಜನಾಂಗಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕಾರ್ಯಕ್ರಮ ಉದ್ಘಾಟಿಸುವುದಿಲ್ಲ ಎಂದು ಪ್ರತಿಭಟನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts