ಕರ್ನಾಟಕದ RGUHS ಕಾಲೇಜುಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಗೂ ರಾಷ್ಟ್ರಗೀತೆ ಕಡ್ಡಾಯ!

untitled-design-2025-08-26t113818858-68ad50b516b50
Published on

RGUHS : ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) ತನ್ನ ಅಂಗಸಂಸ್ಥೆಯಲ್ಲಿರುವ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದು, ಯಾವುದೇ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು ಹಾಡಬೇಕು ಹಾಗೂ ರಾಷ್ಟ್ರಗೀತೆಯಲ್ಲಿ ಕಾರ್ಯಕ್ರಮ ಕೊನೆಗೊಳ್ಳಬೇಕು ಎಂದು ಆದೇಶ ನೀಡಿದೆ.

ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಾಡಗೀತೆ ಹೇಳುವುದು ರಾಜ್ಯ ಸರ್ಕಾರ ಸೂಚಿಸಿದ ಪ್ರೋಟೋಕಾಲ್​ನ ಭಾಗವಾಗಿದೆ. ಕೆಲವು ಕಾಲೇಜುಗಳು ಈ ಪ್ರೋಟೋಕಾಲ್​ ಪಾಲಿಸುತ್ತಿಲ್ಲ ಎಂದು RGUHS ಅಧಿಕಾರಿಗಳು ಒಪ್ಪಿಕೊಂಡಿದ್ದು, ಈ ವಿಚಾರದಿಂದಾಗಿ ಸುತ್ತೋಲೆ ಹೊರಡಿಸಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ರಾಷ್ಟ್ರಗೀತೆ ನುಡಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಲ್ಲಿ ದೇಶ ಪ್ರೇಮವನ್ನು ತುಂಬುವುದು ಇದರ ಮುಖ್ಯ ಉದ್ದೇಶವಾಗಿದೆ.

ದೇಶಾದ್ಯಂತ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಹಾಗೇ ಅವರು ಕರ್ನಾಟಕದ ಸಂಸ್ಕೃತಿಯೊಂದಿಗೆ ಪರಿಚಿತರಾಗುವುದು ಮುಖ್ಯ ಎಂದು ಆರ್​ಜಿಯುಎಚ್​ಎಸ್​ ಉಪಕುಲಪತಿ ಡಾ. ಬಿ.ಸಿ ಭಗವಾನ್​​ ತಿಳಿಸಿದ್ದಾರೆ.

ಇದಲ್ಲದೇ, ಸಭೇ ಸಮಾರಂಭದಲ್ಲಿ ಶಾಲು, ಹೂವು, ಹಣ್ಣು ನೀಡಿ, ಗೌರವ ತೋರಿಸುವುದರ ಬದಲಿಗೆ ಅವರಿಗೆ ವೈದ್ಯಕೀಯ ಪುಸ್ತಕಗಳನ್ನು ನೀಡಿ. ನಾವು ಹಲವಾರು ವೈದ್ಯಕೀಯ ಪುಸ್ತಕಗಳನ್ನು ಹೊಂದಿರಬೇಕು. ಉಡುಗೊರೆಯಾಗಿ ಬಂದಂತಹ ಪುಸ್ತಕಗಳನ್ನು ಅಗತ್ಯ ಇರುವಂತಹ ಯಾವುದಾದರೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ನೀಡಬೇಕು ಎಂದು​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net