

ಮೈಸೂರು: ಆರು ತಿಂಗಳ ಹಿಂದೆಯೇ ಮಲೇಷ್ಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಯುವಕನೊಬ್ಬನ ಮೃತದೇಹ ಇದೀಗ ಹುಟ್ಟೂರಿಗೆ ಆಗಮಿಸಿದ್ದು, ಕಣ್ಣೀರಿನ ನಡುವೆಯೇ ಕೊನೆಗೂ ಮಗನ ಅಂತ್ಯಕ್ರಿಯೆ ನೆರವೇರಿಸಿ ತಾಯಿ ಸಮಾಧಾನ ಮಾಡಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ನಿವಾಸಿ ಸುಮಂತ್ (22) ಕಳೆದ ಡಿಸೆಂಬರ್‌ನಲ್ಲಿ ಕೆಲಸಕ್ಕೆಂದು ಮಲೇಷ್ಯಾಗೆ ತೆರಳಿದ್ದರು. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ, ಮಧ್ಯವರ್ತಿಯೊಬ್ಬ ಸುಮಂತ್ರನ್ನು ಕೊರೆದೊಯ್ದಿದ್ದ. ಆದರೆ, ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ವಂಚಿಸಿದ್ದ.
ಇದರಿಂದ ಮನನೊಂದಿದ್ದ ಸುಮಂತ್ ಮರಳಿ ಬರುವುದಾಗಿ ತಾಯಿಗೆ ಹೇಳಿಕೊಂಡಿದ್ದ. ಅಷ್ಟರಲ್ಲಾಗಲೇ ಸುಮಂತ್ ಮೃತಪಟ್ಟಿರುವ ವಿಚಾರವನ್ನು ಸಹೋದ್ಯೋಗಿಗಳು ತಾಯಿಗೆ ತಿಳಿಸಿದ್ದರು. ಈ ವಿಚಾರ ಕೇಳಿದ ತಾಯಿಯ ಹೃದಯ ಶಾಕ್ಗೆ ಒಳಗಾಗಿತ್ತು. ಮಗನ ನಿಗೂಢ ಸಾವು ನುಂಗಲಾರದ ತುತ್ತಾಗಿತ್ತು.
ಆದರೂ ನೋವಿನಲ್ಲೇ ಸಾವಿನ ತನಿಖೆ ಹಾಗೂ ಮೃತದೇಹವನ್ನು ತರಿಸಿಕೊಳ್ಳಲು ಭಾರತದ ರಾಯಭಾರ ಕಚೇರಿಗೆ ಸುಮಂತ್ ಪಾಲಕರು ಮನವಿ ಮಾಡಿದ್ದರು. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶವ ಕಳುಹಿಸುವುದು ಆರು ತಿಂಗಳ ತಡವಾಗಿತ್ತು. ಇದೀಗ ಸುಮಂತ್ ಶವ ತಡವಾಗಿ ಆಗಮಿಸಿದ್ದು, ನಗು ನಗುತ್ತಾ ಹೋದ ಮಗ ಶವವಾಗಿ ಬಂದಿದ್ದನ್ನು ಕಂಡ ಪಾಲಕರ ಆಕ್ರಂದನ ಮುಗಿಲು ಮಟ್ಟಿದೆ. (ದಿಗ್ವಿಜಯ ನ್ಯೂಸ್)