

ಚಿಕ್ಕಬಳ್ಳಾಪುರ: ರಸ್ತೆಯಲ್ಲಿ ಒಂದು ರೂಪಾಯಿ ಕಾಯಿನ್ ಸಿಕ್ಕರೂ ಥಟ್ ಅಂತ ಎತ್ತಿಕೊಂಡು ಜೇಬಿಗಿಳಿಸಿಕೊಂಡು ಹೋಗುವವರೇ ಹೆಚ್ಚು. ಇನ್ನು ಚಿನ್ನ ಸಿಕ್ಕರೆ ಬಿಡ್ತಾರಾ? ಆದರೆ ಇಲ್ಲೊಬ್ಬರು ಮದುವೆ ಕಲ್ಯಾಣ ಮಂಟಪದ ಮುಂಭಾಗ ಸಿಕ್ಕ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮರೆದಿದ್ದಾರೆ.
ಇಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ಸಂಭವಿಸಿದೆ. ಇಲ್ಲಿನ ಕೆಎಂಡಿ ಕಲ್ಯಾಣ ಮಂಟಪದಲ್ಲಿ ವಾಚ್ಮನ್ ಆಗಿರುವ ಮೈಸೂರು ಮೂಲದ ಮಾದಪ್ಪ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಕಲ್ಯಾಣ ಮಂಟಪದಲ್ಲಿ ನಗರದ ಅಕ್ಕಿ ವ್ಯಾಪಾರಿ ಮದನಪಲ್ಲಿ ವೆಂಕಟೇಶ್ ಅವರ ಪುತ್ರಿ ಆಶಿಕಾ ವಿವಾಹಕ್ಕೆ ಇತ್ತೀಚಿಗೆ ನಡೆದಿತ್ತು. ಮದುವೆ ಗೆ ಹಿಂದೂಪುರದಿಂದ ಬಂದಿದ್ದ ಪ್ರೇಮಲೀಲಾ ಎಂಬುವರು ರಾತ್ರಿ ಕಲ್ಯಾಣ ಮಂಟಪದ ಸಮೀಪ ಬಂದಿದ್ದ ಬಸ್ಗೆ ಹತ್ತುವ ಗಾಬರಿಯಲ್ಲಿ ಬ್ಯಾಗ್ ಕಳೆದುಕೊಂಡಿದ್ದರು.
ಕಲ್ಯಾಣ ಮಂಟಪದ ಗೇಟ್ ಹಾಕಲು ಬಂದ ವಾಚ್ಮನ್ ಮಾದಪ್ಪಗೆಗೆ ಬ್ಯಾಗ್ ಸಿಕ್ಕಿದ್ದು, ಮಂಟಪದ ಮಾಲೀಕ ಮಂಜುನಾಥ್ರಿಗೆ ತಲುಪಿಸಿದ್ದರು. ಶುಕ್ರವಾರ ಪ್ರೇಮಲೀಲಾ ಅವರ ಸಂಬಂಧಿಗೆ ಚಿನ್ನದ ಬ್ಯಾಗ್ ಅನ್ನು ಒಪ್ಪಿಸಲಾಯಿತು. 3 ದಶಕದಿಂದ ವಾಚ್ಮನ್ ಆಗಿ ಮಾದಪ್ಪ ಕೆಲಸ ಮಾಡುತ್ತಿದ್ದಾರೆ.
ಚಿನ್ನಾಭರಣ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆಗೆ ಮಾದಪ್ಪ ಅವರನ್ನು ಕಲ್ಯಾಣ ಮಂಟಪದಲ್ಲಿ ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ರಂಗಸ್ವಾಮಯ್ಯ, ಎಪಿಎಂಸಿ ಮಾಜಿ ನಿರ್ದೇಶಕ ಎಂ.ಎಂ.ಎಸ್ ಶ್ರೀನಿವಾಸ್, ವಕೀಲ ಚಂದ್ರಶೇಖರ್, ಆರ್ಯವೈಶ್ಯರ ಸಂಘದ ಅಧ್ಯಕ್ಷ ಅಶ್ವತ್ಥ್ನಾರಾಯಣ ಮತ್ತಿತರರು ಸನ್ಮಾನಿಸಿದ್ದಾರೆ.