

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಭಾರತಕ್ಕೆ ಮರಳಿರುವ ಸುರೇಶ್ ರೈನಾ ಇಂದು ಟ್ವೀಟ್ ಮಾಡಿದ್ದಾರೆ. ಮಾವನ ಹತ್ಯೆ, ಅತ್ತೆಯ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ..ಹಾಗೇ ಅಂದು ರಾತ್ರಿ ನಡೆದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನನ್ನ ಸಹೋದರ ಸಂಬಂಧಿಯೋರ್ವ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ ಎಂದೂ ತಿಳಿಸಿದ್ದಾರೆ.
ಸುರೇಶ್ ರೈನಾ ವಾಪಸ್ ಬರುತ್ತಿದ್ದಂತೆ ಹರಡಿದ ಸುದ್ದಿಗಳು ಒಂದೆರಡಲ್ಲ. ಅದೆಷ್ಟೋ ಊಹಾಪೋಹಗಳು ಎದ್ದಿದ್ದವು. ಬಾಲ್ಕನಿ ಕೊಠಡಿ ವಿಚಾರಕ್ಕೆ ಜಗಳವಾಡಿಕೊಂಡು ಬಂದಿದ್ದಾರೆ..ಇನ್ನುಮುಂದೆ ಸಿಎಸ್ಕೆ ತಂಡದಲ್ಲಿ ಆಡುವುದಿಲ್ಲ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಎಲ್ಲ ಊಹಾಪೋಹಗಳಿಗೂ ಫುಲ್ಸ್ಟಾಪ್ ಇಡುವಂತೆ ಸುರೇಶ್ ರೈನಾ ಅವರೇ ಟ್ವೀಟ್ ಮಾಡಿದ್ದಾರೆ.
ಪಂಜಾಬ್ನ ಪಠಾಣ್ಕೋಟ್ನಲ್ಲಿರುವ ಸುರೇಶ್ ರೈನಾ ಅವರ ಅತ್ತೆ (ತಂದೆಯ ಸೋದರಿ), ಮಾವ ಮತ್ತು ಕುಟುಂಬದವರೆಲ್ಲ ರಾತ್ರಿ ಮನೆಯಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಅದರಲ್ಲಿ ರೈನಾ ಮಾವ ಸಾವನ್ನಪ್ಪಿದ್ದರೆ, ಅತ್ತೆಯ ಸ್ಥಿತಿ ಗಂಭೀರವಾಗಿತ್ತು. ಹಾಗೇ ಮನೆಯವರೂ ಕೂಡ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಬಾಲ್ಕನಿ ಕೊಠಡಿ ಕೊಟ್ಟಿಲ್ಲವೆಂದು ಸಿಎಸ್ಕೆಯನ್ನೇ ತೊರೆದ ಸುರೇಶ್ ರೈನಾ…?!
ಆ ರಾತ್ರಿ ನಿಜಕ್ಕೂ ಆಗಿದ್ದೇನು ಎಂಬುದು ಇಂದಿನವರೆಗೆ ನಮಗೆ ಯಾರಿಗೂ ಸರಿಯಾಗಿ ಅರ್ಥವಾಗುತ್ತಿಲ್ಲ. ಯಾರು ಮಾಡಿದ್ದಾರೆ ಎಂಬುದೂ ತಿಳಿದಿಲ್ಲ. ಈ ದಾಳಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಬೇಕು ಎಂದು ನಾನು ಪಂಜಾಬ್ ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ಅಪರಾಧಿಗಳನ್ನು ಶೀಘ್ರವೇ ಬಂಧಿಸಬೇಕು..ಅವರು ಇನ್ನಷ್ಟು ದುಷ್ಕೃತ್ಯ ಎಸಗಲು ಬಿಡಬಾರದು ಎಂದು ಒಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಹಾಗೇ ಇನ್ನೊಂದು ಟ್ವೀಟ್ ಮಾಡಿ, ಭಯಾನಕತೆಗೂ ಮೀರಿದ ಘಟನೆ ನಮ್ಮ ಕುಟುಂಬದಲ್ಲಿ ನಡೆದು ಹೋಯಿತು. ನನ್ನ ಮಾವನನ್ನು ಕೊಲೆ ಮಾಡಲಾಗಿದೆ. ಅತ್ತೆ ಮತ್ತು ಇಬ್ಬರು ಸೋದರ ಸಂಬಂಧಿಗಳು ಗಾಯಗೊಂಡಿದ್ದಾರೆ. ಅದರಲ್ಲೂ ಓರ್ವ ಕಸಿನ್ ನಿನ್ನೆ ರಾತ್ರಿ ತೀರಿಕೊಂಡರು. ಅತ್ತೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ರೈನಾ ತಿಳಿಸಿದ್ದಾರೆ. (ಏಜೆನ್ಸೀಸ್)