ಕೆಎಸ್​ಸಿಎ 1 ಕೋಟಿ ರೂ., ರಹಾನೆ 10 ಲಕ್ಷ ರೂ. ದೇಣಿಗೆ

Rahane
Published on

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಲಾ 50 ಲಕ್ಷ ರೂಪಾಯಿ ದೇಣಿಗೆ ಘೊಷಿಸಿದೆ. ಒಟ್ಟು 1 ಕೋಟಿ ರೂಪಾಯಿ ದೇಣಿಗೆ ನೀಡಿರುವ ಕೆಎಸ್​ಸಿಎ, ಇತರ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗಿಂತ ಹೆಚ್ಚಿನ ಮೊತ್ತ ಘೊಷಿಸಿದಂತಾಗಿದೆ.

ಬಿಸಿಸಿಐ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ಹಾಗೂ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ನೀಡುತ್ತಿದ್ದು, ಈ ಹಂತದಲ್ಲಿ ಎರಡು ಸರ್ಕಾರಗಳಿಗೆ ಬೆಂಬಲ ನೀಡುತ್ತಿರುವುದಾಗಿ ಕೆಎಸ್​ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಜತೆಗೆ ಕರ್ನಾಟಕ ಸರ್ಕಾರ ಯಾವುದೇ ರೀತಿಯ ನೆರವು ನಿರೀಕ್ಷಿಸಿದರೂ ಕೆಎಸ್​ಸಿಎ ಸದಾ ಬೆಂಬಲ ನೀಡಲಿದ್ದು, ಎಲ್ಲ ಹಂತದಲ್ಲೂ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದರು. ಶನಿವಾರವಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 51 ಕೋಟಿ ರೂಪಾಯಿ ನೆರವು ಘೊಷಿಸಿತ್ತು. ಇದಕ್ಕೂ ಮೊದಲು ಬಂಗಾಳ, ಮುಂಬೈ, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಗಳು ದೇಣಿಗೆ ನೀಡುವುದಾಗಿ ಘೊಷಿಸಿದ್ದವು.

ಸ್ಟೇಡಿಯಂ ನೀಡಲು ಸಿದ್ಧ: ಕರೊನಾ ವೈರಸ್ ಸೋಂಕಿತರ ಕ್ವಾರಂಟೈನ್ ವ್ಯವಸ್ಥೆಗಾಗಿ ರಾಜ್ಯ ಸರ್ಕಾರಕ್ಕೆ ಅಗತ್ಯವಿದ್ದರೆ ಚಿನ್ನಸ್ವಾಮಿ ಸ್ಟೇಡಿಯಂ ನೀಡಲು ಸಿದ್ಧವಿರುವುದಾಗಿ ವಿನಯ್ ಮೃತ್ಯುಂಜಯ ‘ವಿಜಯವಾಣಿ’ಗೆ ತಿಳಿಸಿದರು. ಈಗಾಗಲೇ ದೇಶದ ವಿವಿಧ ಸ್ಟೇಡಿಯಂಗಳನ್ನು ಕ್ವಾರಂಟೈನ್ ವ್ಯವಸ್ಥೆಗೆ ಸ್ಥಳೀಯ ಸರ್ಕಾರಗಳು ಗುರುತಿಸಿವೆ.

10 ಲಕ್ಷ ರೂ. ನೀಡಿದ ರಹಾನೆ

ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈಗಾಗಲೇ ಕೋವಿಡ್-19ರ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿರುವ ದಿಗ್ಗಜ ಸಚಿನ್ ತೆಂಡುಲ್ಕರ್, ಸುರೇಶ್ ರೈನಾ ಸಾಲಿಗೆ ರಹಾನೆ ಸೇರ್ಪಡೆಗೊಂಡಿದ್ದಾರೆ.

1ಲಕ್ಷ ರೂ.ಘೋಷಿಸಿದ ಶರದ್

ಏಷ್ಯನ್ ಪ್ಯಾರಾ ಗೇಮ್ಸ್​ನ ಹೈಜಂಪ್ ಚಾಂಪಿಯನ್ ಶರದ್ ಕುಮಾರ್ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ದೇಣಿಗೆ ಘೊಷಿಸಿದ್ದಾರೆ. ‘ನಾನು 1 ಲಕ್ಷ ರೂಪಾಯಿ ನೀಡುತ್ತಿದ್ದೇನೆ, ಕೋವಿಡ್-19 ತಡೆಗಟ್ಟಲು ಎಲ್ಲರೂ ಒಂದಾಗೋಣ’ ಎಂದು ಬಿಹಾರದ 29 ವರ್ಷದ ಪ್ಯಾರಾಥ್ಲೀಟ್ ಟ್ವೀಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ. 2014ರ ಪ್ಯಾರಾ ಏಷ್ಯನ್ ಗೇಮ್ಸ್​ನ ಟಿ24 ವಿಭಾಗ ಹಾಗೂ 2018 ಪ್ಯಾರಾ ಏಷ್ಯನ್ ಗೇಮ್ಸ್​ನಲ್ಲಿ ಟಿ42/63 ವಿಭಾಗದಲ್ಲಿ ಸ್ವರ್ಣ ಗೆದ್ದಿದ್ದರು. ಜತೆಗೆ 2017ರ ಐಪಿಸಿ ವಿಶ್ಚ ಚಾಂಪಿಯನ್​ಷಿಪ್​ನಲ್ಲೂ ಬೆಳ್ಳಿ ಗೆದ್ದಿದ್ದರು.

-ಠಿ;30 ಸಾವಿರ ನೀಡಿದ ಶೂಟರ್

ಯುವ ಶೂಟರ್ ಇಶಾ ಸಿಂಗ್ ಭಾನುವಾರ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 30 ಸಾವಿರ ರೂ. ದೇಣಿಗೆ ನೀಡುವುದಾಗಿ ಹೇಳಿದ್ದಾರೆ. 15 ವರ್ಷದ ಶೂಟರ್, ಇಷ್ಟು ದಿನಗಳ ಕಾಲ ಕೂಡಿಟ್ಟ ಹಣವನ್ನು ಕರೊನಾ ವೈರಸ್ ವಿರುದ್ಧ ಹೋರಾಡಲು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರಿಚಾ ಘೊಷ್ 1 ಲಕ್ಷ ರೂಪಾಯಿ ಘೊಷಣೆ

ಕೋಲ್ಕತ: 16 ವರ್ಷದ ಆಲ್ರೌಂಡರ್ ರಿಚಾ ಘೊಷ್ ಬಂಗಾಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ಘೊಷಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ರಿಚಾ ಅವರ ತಂದೆ ಮನಬೇಂದ್ರ ಘೊಷ್, ಸಿಲಿಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಮಂತ ಸಹಾಯ್ ಅವರ ನಿವಾಸಕ್ಕೆ ತೆರಳಿ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ತಿಳಿಸಿದೆ. ‘ಪ್ರತಿಯೊಬ್ಬರು ಕೋವಿಡ್ ವಿರುದ್ಧ ಹೋರಾಡಬೇಕು, ದೇಣಿಗೆ ನೀಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ’ ಎಂದು ತಿಳಿಸಿದ್ದಾರೆ. ರಿಚಾ ಟಿ20 ವಿಶ್ವಕಪ್​ನಲ್ಲಿ 2 ಪಂದ್ಯಗಳನ್ನಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net