ಚಂಡೀಗಢ: ಪ್ರಧಾನಿ ಮೋದಿಯವರ ಮುಂದೆ ಅರವಿಂದ್ ಕೇಜ್ರಿವಾಲ್ ತಲೆಬಾಗುವುದಿಲ್ಲ ಎಂದು ದೆಹಲಿ ಸಿಎಂ ಪತ್ನಿ ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ. ಬಿಜೆಪಿ ತನ್ನ ವಿರೋಧಿಗಳನ್ನು ಜೈಲಿಗೆ ಹಾಕುತ್ತದೆ. ಬಿಜೆಪಿಗೆ ಕೇವಲ ಅಧಿಕಾರದ ದುರಾಸೆ. ಪಕ್ಷಗಳನ್ನು ಒಡೆಯುವುದು ಬಿಜೆಪಿಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ.
ಇದನ್ನು ಓದಿ: ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಐಎಎಸ್‌ನಿಂದ ವಜಾಗೊಳಿಸಿದ ಕೇಂದ್ರ
ಹರಿಯಾಣ ವಿಧಾನಸಭಾ ಚುನಾವಣಾ ಪ್ರಚಾರದ ಅಂಗವಾಗಿ ಭಿವಾನಿಯ ಟೌನ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತನ್ನನ್ನು ಹರಿಯಾಣದ ಸೊಸೆ ಎಂದಿದ್ದಾರೆ. ಹರಿಯಾಣದ ಹುಡುಗನೊಬ್ಬ ದೆಹಲಿ ಸಿಎಂ ಆಗುತ್ತಾನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕೇಜ್ರಿವಾಲ್ ಅವರು ಮಾಡಿದ ಕೆಲಸಗಳಿಂದ ಹರಿಯಾಣದ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿಗೆ ಪಕ್ಷಗಳನ್ನು ಒಡೆಯುವುದು ಮತ್ತು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕುವುದು ಹೇಗೆಂದು ಗೊತ್ತಿದೆ. ಅವರಿಗೆ ಸಮಾಜಕ್ಕಾಗಿ ದುಡಿಯುವ ಆಸಕ್ತಿಯೇ ಇಲ್ಲ. ಅರವಿಂದ್ ಕೇಜ್ರಿವಾಲ್ ಒಬ್ಬ ಕಳ್ಳ ಎಂದು ಹೇಳುತ್ತಿದ್ದಾರೆ . ಅವರು ಕಳ್ಳರಾಗಿದ್ದರೆ ಈ ಜಗತ್ತಿನಲ್ಲಿ ಯಾರೂ ಪ್ರಾಮಾಣಿಕರಲ್ಲ. ನಿಮ್ಮ ಸೊಸೆಯಾಗಿ ಕೇಳುತ್ತಿದ್ದೇನೆ ಈ ಅವಮಾನಕ್ಕೆ ನೀವು ಸೇಡು ತೀರಿಸಿಕೊಳ್ಳುತ್ತೀರಾ? ಎಂದು ಕೇಳಿದರು.
ಕಳೆದ 10 ವರ್ಷಗಳಿಂದ ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದ್ದರೂ ರಾಜ್ಯದಲ್ಲಿ ಯಾವುದೇ ಕೆಲಸ ನಡೆದಿಲ್ಲ. ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಆದರೆ ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಅಧಿಕಾರದಲ್ಲಿರುವುದರಿಂದ ಎಲ್ಲಾ ಸಾರ್ವಜನಿಕ ಕೆಲಸಗಳನ್ನು ಮಾಡಲಾಗಿದೆ. 24 ಗಂಟೆ ಉಚಿತ ವಿದ್ಯುತ್ ಲಭ್ಯವಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳು ಉತ್ತಮವಾಗಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ವೃದ್ಧರಿಗೆ ಉಚಿತ ತೀರ್ಥಯಾತ್ರೆಗೆ ಅವಕಾಶವಿದ್ದು, ಈಗ ಪ್ರತಿ ಮಹಿಳೆಗೆ ಪ್ರತಿ ತಿಂಗಳು 1000 ರೂಪಾಯಿ ಸಿಗುತ್ತಿದೆ ಎಂದು ಹೇಳಿದರು. (ಎಜೆನ್ಸೀಸ್)