ಮನೆಯಿಂದ ಹೊರಗೆ ಹೋದ್ರೆ ಸಾಕು…ಪೊಲೀಸ್​ ಪತಿಯ ಕರಾಳ ಮುಖ ಬಿಚ್ಚಿಟ್ಟು ಸಾವಿನ ಹಾದಿ ಹಿಡಿದ ಗೃಹಿಣಿ

Wife
Published on

ಹೈದರಾಬಾದ್​: ನನ್ನ ಪತಿ ಓರ್ವ ದೊಡ್ಡ ಹುಚ್ಚ ಎಂದು ಡೆತ್​ನೋಟ್​ ಬರೆದಿಟ್ಟು ಗೃಹಿಣಿಯೊಬ್ಬರು ಸಾವಿನ ಹಾದಿ ಹಿಡಿದಿರುವ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ನಾಸ್ಪುರ್​ ಪಟ್ಟಣದಲ್ಲಿ ನಡೆದಿದೆ.

ಮೃತಳನ್ನು ವನಿತಾ (35) ಎಂದು ಗುರುತಿಸಲಾಗಿದೆ. ಗಂಡನ ನಿರಂತರ ಕಿರುಕುಳ ಹಾಗೂ ತನ್ನ ಮೇಲೆ ಸದಾ ಅನುಮಾನಿಸುವುದನ್ನು ಸಹಿಸದೇ ವನಿತಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.

ವಿವರಣೆಗೆ ಬರುವುದಾರೆ, ಮೃತ ವನಿತಾ 15 ವರ್ಷಗಳ ಹಿಂದೆ ಚೆನ್ನೂರು ಮಂಡಲದ ಸುದ್ದಾಲ ಗ್ರಾಮದ ನಿವಾಸಿ ಹಾಗೂ ಆಸಿಫಾಬಾದ್​ ಜಿಲ್ಲೆಯ ತ್ರಿಯಾಣಿ ಪೊಲೀಸ್​ ಠಾಣೆಯಲ್ಲಿ ಹೆಡ್​ ಕಾನ್ಸ್​ಟೇಬಲ್​ ಆಗಿ ಕೆಲಸ ನಿರ್ವಹಿಸುತ್ತಿರುವ ಅಕುದ್ರಿ ಕಿಸ್ತಯ್ಯ ಎಂಬುವರನ್ನು ವಿವಾಹವಾಗಿದ್ದರು.

ದಂಪತಿ ನಾಸ್ಪುರದ ನಾಗಾರ್ಜುನ ಕಾಲನಿಯಲ್ಲಿರುವ ಸಿಂಗರೇಣಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ದಂಪತಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿದೆ. ಆದರೆ, ಪತ್ನಿಯ ಮೇಲೆ ಅನುಮಾನದ ಹುತ್ತ ಬೆಳೆಸಿಕೊಂಡಿದ್ದ ಕಿಸ್ತಯ್ಯ, ಸದಾ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದೇ ಸೋಮವಾರ ಬೆಳಗ್ಗೆ ವನಿತಾ ಸಾವಿನ ಹಾದಿ ಹಿಡಿದಿದ್ದಾರೆ. ಮಧ್ಯಾಹ್ನ ಪತಿ ಕೆಲಸ ಮುಗಿಸಿ ಬಂದು ನೋಡಿದಾಗ ಈ ಸಂಗತಿ ಬಯಲಾಗಿದೆ.

ಪತ್ನಿಯ ಶವ ನೋಡಿದ ಕಿಸ್ತಯ್ಯ ನೆರೆಮನೆಯವರಿಗೆ ವಿಚಾರ ತಿಳಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ. ನೆರೆಮನೆಯವರು ವನಿತಾ ಸಾವಿನ ವಿಚಾರವನ್ನು ಆಕೆಯ ಪಾಲಕರಿಗೂ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಎಸ್​ಎಸ್​ಐ ರವಿಕುಮಾರ್​ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆದು, ಮೃತದೇಹವನ್ನು ಮಂಚಿರ್ಯಾಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪತಿ ಕಿಸ್ತಯ್ಯ ವಿರುದ್ಧ ವನಿತಾ ಅವರು ಪಾಲಕರು ಸಹ ದೂರು ನೀಡಿದ್ದಾರೆ. ವನಿತಾ ಬರೆದಿರುವ ಡೆತ್​ನೋಟ್​ ಪತ್ತೆಯಾಗಿದ್ದು, ನನ್ನ ಗಂಡ ಓರ್ವ ದೊಡ್ಡ ಹುಬ್ಬ. ನಾನು ಮನೆಯಿಂದ ಹೊರ ಹೋದರೆ ಸಾಕು, ನನ್ನ ಮೇಲೆ ಅನುಮಾನ ಪಡುತ್ತಿದ್ದ. ಆತನ ಕಿರುಕುಳದಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಹೀಗಾಗಿ ನಾನು ಸಾವಿನ ಹಾದಿ ಹಿಡಿಯುತ್ತಿದ್ದೇನೆ. ನನ್ನ ಕ್ಷಮಿಸಿ ಎಂದು ಅಪ್ಪ-ಅಮ್ಮನಿಗೆ ಹೇಳಿರುವ ವನಿತಾ, ಮಕ್ಕಳನ್ನು ಗಂಡನ ಕೈಗೆ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net