ಹೃದಯವೇ ಬಾಯಿಗೆ ಬಂದಂತಾಗಿತ್ತು; ನಟಿ ಪಾರುಲ್ ಯಾದವ್​ಗೆ ಅಷ್ಟು ಭಯವಾಗಿದ್ದೇಕೆ?

Untitled-1
Published on

ಬೆಂಗಳೂರು: ಭಾರಿ ಭಯಕ್ಕೆ ಒಳಗಾಗಿದ್ದ ಸಂದರ್ಭವನ್ನು ವಿವರಿಸುವಾಗ ಬಹಳಷ್ಟು ಮಂದಿ, 'ಜೀವ ಕೈಯಲ್ಲೇ ಹಿಡಿದುಕೊಂಡಿದ್ದೆ', 'ಎದೆ ಧಸಕ್ ಅನಿಸ್ತು ಒಮ್ಮೆ..' ಹೀಗೆ ನಾನಾ ರೀತಿಯಲ್ಲಿ ಹೇಳಿಕೊಳ್ಳುವುದಿದೆ. ಅಂಥದ್ದೇ ಒಂದು ಭಯಕ್ಕೆ ಒಳಗಾಗಿರುವ ನಟಿ ಪಾರುಲ್​ ಯಾದವ್​ ಇದೀಗ, 'ಹೃದಯವೇ ಬಾಯಿಗೆ ಬಂದ ಹಾಗೆ ಆಗಿತ್ತು' ಎಂಬುದಾಗಿ ತಮಗಾದ ಭಯದ ಅನುಭವವನ್ನು ವರ್ಣನಾತ್ಮಕವಾಗಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಅವರು ಹಾಗೆ ಭಯಗೊಳ್ಳಲು ಕಾರಣ ಹುಲಿರಾಯ. ಹಾಗಂತ ಅವರು ಯಾವುದಾದರೂ ಸಿನಿಮಾದಲ್ಲಿ ಹುಲಿಯೊಂದಿಗೆ ಇರುವ ದೃಶ್ಯದಲ್ಲಿ ಪಾಲ್ಗೊಂಡಿದ್ದರಾ ಎಂದು ಕೇಳಿದರೆ ವಿಷಯ ಅದಲ್ಲ. ಏಕೆಂದರೆ ಅವರು ಹೀಗೆ ಭೀತಿಗೊಳಗಾಗಲು ಕಾರಣ ಬೆಂಗಳೂರಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​​ನ ಹುಲಿ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ಗೆ ಹೋಗಿರುವ 'ಪ್ಯಾರ್​ಗೆ ಆಗ್​ಬಿಟ್ಟೈತೆ' ಚೆಲುವೆ ಪಾರುಲ್ ಯಾದವ್​ಗೆ ಅಲ್ಲಿರುವ ವನ್ಯಜೀವಿಗಳ ಮೇಲೂ ಪ್ಯಾರ್​ಗೆ ಆಗ್​ಬಿಟ್ಟೈತಂತೆ. 'ವಿಶ್ವ ವನ್ಯಜೀವಿ ದಿನ'ದಂದೇ ಅವರು ವನ್ಯಜೀವಿಗಳ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬನ್ನೇರುಘಟ್ಟ ನ್ಯಾಷನಲ್​ ಪಾರ್ಕ್​ಗೆ ಹೋಗಿದ್ದಾಗ ಕಾಣಿಸಿದ ಸಿಂಹ, ಹುಲಿ, ಕಾಡುಕೋಣ ಮುಂತಾದ ಕಾಡುಪ್ರಾಣಿಗಳ ವಿಡಿಯೋ ಹಂಚಿಕೊಂಡಿರುವ ಅವರು ಬನ್ನೇರುಘಟ್ಟ ನ್ಯಾಷನಲ್​ ಪಾರ್ಕ್​ ನೋಡಲೇಬೇಕಾದ ಸ್ಥಳವೆಂದು ಶಿಫಾರಸು ಮಾಡಿದ್ದಾರೆ. ಸ್ವಚ್ಛಂದವಾಗಿ ಅಡ್ಡಾಡುವ ವನ್ಯಜೀವಿಗಳನ್ನು ನೋಡಿದಾಗ ಆಗುವ ಖುಷಿಗೆ ಯಾವ ಹೋಲಿಕೆಯೂ ಇಲ್ಲ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಮಾತ್ರವಲ್ಲ, 'ಈ ಇಡೀ ವಿಡಿಯೋ ಚಿತ್ರೀಕರಿಸಿಕೊಳ್ಳುವ ಅಷ್ಟೂ ಹೊತ್ತು ನನ್ನ ಹೃದಯ ಬಾಯಿಗೇ ಬಂದ ಹಾಗೆ ಆಗಿತ್ತು' ಎಂದು ಆಗಿನ ಅನುಭವವನ್ನೂ ಅವರು ಹೇಳಿಕೊಂಡಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net