ಟ್ರಂಪ್​-ಮಸ್ಕ್​ ಮುಸುಕಿನ ಗುದ್ದಾಟ! ಇಬ್ಬರ ಜಟಾಪಟಿಯಲ್ಲಿ ಸ್ಪೇಕ್​​ ಎಕ್ಸ್​ಗೆ ಕುತ್ತು, ಒಪ್ಪಂದ ರದ್ದು? | Trump-Musk Fight

ವಿಜಯವಾಣಿ (36)
Published on

Trump-Musk Fight: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ನಡುವಿನ ಭಿನ್ನಾಭಿಪ್ರಾಯಗಳು ದಿನದಿಂದ ದಿನಕ್ಕೆ ಹಳ್ಳ ಹಿಡಿಯುತ್ತಿವೆ. ಇಬ್ಬರೂ ಪರಸ್ಪರ ಆರೋಪಗಳನ್ನು ಮಾಡುತ್ತಿರುವುದು ಹಲವರ ಗೊಂದಲಕ್ಕೂ ಕಾರಣವಾಗಿದೆ. ಇತ್ತೀಚೆಗೆ, ಮಸ್ಕ್ ಟ್ರಂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಇದು ದೊಡ್ಡ ಬಾಂಬ್‌ಶೆಲ್‌ನಂತಹ ಸ್ಫೋಟಕ ಸಂಗತಿ ಹೇಳುವ ಸಮಯ. ಎಪ್ಸ್ಟೀನ್ ಫೈಲ್‌ಗಳಲ್ಲಿ ಟ್ರಂಪ್ ಹೆಸರಿದೆ. ಅದಕ್ಕಾಗಿಯೇ ಆ ಫೈಲ್‌ಗಳ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ ಎಂಬ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದರು. ಸದ್ಯ ಇಬ್ಬರ ವೈಮನಸ್ಸು ಇದೀಗ ಹಲವಾರು ತೊಂದರೆಗೆ ಎಡಮಾಟ್ಟಿಕೊಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಾಗತಿಕ ಬಿಲಿಯನೇರ್ ಎಲೋನ್ ಮಸ್ಕ್ ನಡುವಿನ ಮಾತಿನ ಸಮರ ಈಗ ದೇಶದ ಬಾಹ್ಯಾಕಾಶ ಯೋಜನೆಗಳ ಭವಿಷ್ಯವನ್ನು ಪ್ರಶ್ನಿಸುವತ್ತ ಸಾಗಿದೆ. ಟ್ರಂಪ್ ಮತ್ತು ಮಸ್ಕ್ ನಡುವೆ ಭುಗಿಲೆದ್ದಿರುವ ವಿವಾದದಿಂದಾಗಿ, ಅಮೆರಿಕದ ನಿರ್ಣಾಯಕ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂಬ ವಿಚಾರ ಹೊರಬಿದ್ದಿದೆ. ಇದು ಸಂಭವಿಸಿದ್ದೇ ಆದಲ್ಲಿ ಅಮೆರಿಕಕ್ಕೆ ಇದು ಯಾವ ಮಟ್ಟಿಗೆ ಪರಿಣಾಮ ಬೀರಬಹುದು? ಎಂಬ ಚರ್ಚೆಗಳು ಸದ್ಯ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮುಖ್ಯವೇ?

ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಡ್ರ್ಯಾಗನ್ ಕ್ಯಾಪ್ಸುಲ್, ಪ್ರಸ್ತುತ ಅಮೆರಿಕದ ಬಾಹ್ಯಾಕಾಶ ಕಾರ್ಯಕ್ರಮದ ಜೀವಾಳವಾಗಿದೆ. ಇದು ಅಮೆರಿಕದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಗಗನಯಾತ್ರಿಗಳು ಮತ್ತು ಸರಕುಗಳನ್ನು ಸಾಗಿಸುವ ಏಕೈಕ ಬಾಹ್ಯಾಕಾಶ ನೌಕೆಯಾಗಿದೆ. ಇದರ ಕಾರ್ಯಕ್ಕೆ ಈಗಾಗಲೇ ಮೆಚ್ಚುಗೆ, ಪ್ರಶಂಸೆಗಳು ಹರಿದುಬಂದಿವೆ. ಹೀಗಿರುವಾಗ ಇಬ್ಬರು ದಿಗ್ಗಜರ ಮನಸ್ತಾಪಗಳು ಅಮೆರಿಕ ಬಾಹ್ಯಾಕಾಶಕ್ಕೆ ತೊಡಕು ತಂದಿಡಲಿದೆಯೇ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಬೋಯಿಂಗ್ ಅಭಿವೃದ್ಧಿಪಡಿಸಿದ 'ಸ್ಟಾರ್‌ ಲೈನರ್' ಪ್ರಯೋಗವು ತಾಂತ್ರಿಕ ಸಮಸ್ಯೆಗಳಿಂದಾಗಿ ಈಗಾಗಲೇ ವಿಫಲವಾಗಿದೆ. ಇದು ಡ್ರ್ಯಾಗನ್ ಅನ್ನು ಅವಲಂಬಿಸುವ ಅಗತ್ಯಕ್ಕೆ ಕಾರಣವಾಗಿದೆ. ನಾಸಾ ಮಾತ್ರವಲ್ಲ, ಟೆಕ್ಸಾಸ್ ಮೂಲದ ಆಕ್ಸಿಯಮ್ ಸ್ಪೇಸ್‌ನಂತಹ ಖಾಸಗಿ ಕಂಪನಿಗಳು ಸಹ ತಮ್ಮ ಕಾರ್ಯಾಚರಣೆಗಳಿಗಾಗಿ ಡ್ರ್ಯಾಗನ್ ಮೊರೆ ಹೋಗಿರುವುದು ಇದೀಗ ಟ್ರಂಪ್​ಗೆ ಬಿಸಿ ಮುಟ್ಟಿಸಿದೆ.

ಸ್ಪೇಸ್‌ಎಕ್ಸ್ ನಾಸಾದ ಬೆನ್ನೆಲುಬು

ಒಂದು ಕಾಲದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾದ ಸೋಯುಜ್ ಕ್ಯಾಪ್ಸುಲ್‌ಗಳನ್ನು ಅವಲಂಬಿಸಿದ್ದ ಅಮೆರಿಕ, 2020ರಲ್ಲಿ ಸ್ಪೇಸ್‌ಎಕ್ಸ್ ಆಗಮನದೊಂದಿಗೆ ರಷ್ಯಾ ಬಳಿ ಕೈಚಾಚುವ ಮನಸ್ಸು ಕಳೆದುಕೊಂಡಿತು. ನಾಸಾ ಈಗ ಸ್ಪೇಸ್‌ಎಕ್ಸ್ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಸ್ಪೇಸ್‌ಎಕ್ಸ್‌ಗೆ ಟಕ್ಕರ್​

ಈ ವಿವಾದವು ಸ್ಪೇಸ್‌ಎಕ್ಸ್‌ನ ಪರ್ಯಾಯಗಳಿಗೆ ಪ್ರಯೋಜನವನ್ನು ನೀಡುತ್ತಿದೆ. ಎಕೋಸ್ಟಾರ್ ಮತ್ತು ಎಎಸ್‌ಟಿ ಸ್ಪೇಸ್‌ಮೊಬೈಲ್‌ನಂತಹ ಕಂಪನಿಗಳ ಷೇರುಗಳು ಇದೀಗ ದಿಢೀರ್​ ಏರಿವೆ. ಭವಿಷ್ಯದಲ್ಲಿ, ಬೋಯಿಂಗ್, ಬ್ಲೂ ಆರಿಜಿನ್ (ಜೆಫ್ ಬೆಜೋಸ್), ಮತ್ತು ಅಮೆಜಾನ್‌ನ ಕೂಪರ್ ಪ್ರಾಜೆಕ್ಟ್ ಸ್ಪೇಸ್‌ಎಕ್ಸ್‌ಗೆ ಕಠಿಣ ಸ್ಪರ್ಧೆಯನ್ನು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net