

ಎನ್.ಆರ್.ಪುರ: ರಬ್ಬರ್‌ಬೆಳೆ ಉತ್ತೇಜಿಸುವ ಸಲುವಾಗಿ ರಬ್ಬರ ಮಂಡಳಿ ಗ್ರಾಮೀಣ ಭಾಗದಲ್ಲಿ ಉಪ ಕೃಷಿಗಳಿಗೂ ಹೆಚ್ಚಿನ ಆದ್ಯ್ಯತೆ ನೀಡುತ್ತಿದೆ ಎಂದು ಶಿವಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿ ಅಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.
ತಾಲೂಕಿನ ಶೆಟ್ಟಿಕೊಪ್ಪ ಚೈತನ್ಯ ರಬ್ಬರ್ ಬೆಳೆಗಾರರ ಸಮಿತಿ ಹಾಗೂ ಶಿಮೊಗ್ಗ ಪ್ರಾದೇಶಿಕ ರಬ್ಬರ್ ಮಂಡಳಿ ಸಹಭಾಗಿತ್ವದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಫಲಾನುಭವಿಗಳಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಣಬೆ ಹಾಗೂ ಜೇನು ಸಾಕಾಣಿಕೆ ರಬ್ಬರ್ ಬೆಳೆಗೆ ಪೂರಕ ಕೃಷಿಗಳಾಗಿವೆ. ಇಂತಹ ಪೂರಕ ಕೃಷಿಗಳನ್ನು ಎಸ್‌ಸಿ, ಎಟಿ ಸಮುದಾಯದವರು ಕೈಗೊಂಡು ಆರ್ಥಿಕವಾಗಿ ಸಧೃಢರಾಗಬೇಕು. ಹೊಸದಾಗಿ ರಬ್ಬರ್ ತೋಟ ಮಾಡುವವರಿಗೆ ರಬ್ಬರ್ ಬೋರ್ಡ್‌ನಿಂದ ಹೆಕ್ಟೇರ್‌ಗೆ 50 ಸಾವಿರ ರೂ. ಸಹಾಯಧನ ನೀಡಲಾಗುವುದು. ಸರ್ಕಾರದ ಈ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಚೈತನ್ಯ ರಬ್ಬರ್ ಬೆಳೆಗಾರರ ಸಮಿತಿ ಅಧ್ಯಕ್ಷ ಪ್ರೇಮ್‌ಜೀ ಮಾತನಾಡಿ, ಶಿವಮೊಗ್ಗ ಪ್ರಾದೇಶಿಕ ರಬ್ಬರ ಮಂಡಳಿ ಯಾವುದೇ ಯೋಜನೆ ತಂದರೂ ಕೂಡ ಅದನ್ನು ಪ್ರಪ್ರಥಮವಾಗಿ ಶೆಟ್ಟಿಕೊಪ್ಪದಲ್ಲಿ ಪ್ರಯೋಗ ಮಾಡುತ್ತಾರೆ. ಈ ಮೂರು ವರ್ಷ ಅವಧಿಯಲ್ಲಿ ಪ್ರತೀ ವರ್ಷ ಕೂಡ ರಬ್ಬರ್ ಮಂಡಳಿಯು ರಬ್ಬರ್ ಟ್ಯಾಪಿಂಗ್, ಜೇನುಕೃಷಿ, ಅಣಬೆ ಕೃಷಿಯಂತಹ ಉಪಯುಕ್ತ ತರಬೇತಿಗಳನ್ನು ನೀಡಿದೆ. ಗ್ರಾಮೀಣ ಭಾಗದ ಜನರಿಗೆ ಇಂತಹ ತರಬೇತಿಗಳಿಂದ ಬಹಳ ಉಪಯೋಗವಾಗಿದೆ ಎಂದರು.
ಗ್ರಾಪಂ ಸದಸ್ಯೆ ಶೈಲಾಮಹೇಶ್, ರಬ್ಬರ್ ಮಂಡಳಿ ಸಹಾಯಕ ಅಭಿವೃದ್ಧಿ ಅಧಿಕಾರಿ ಡಾ.ಮಧುಸೂದನ್, ಪಿಡಿಒ ವಿಂದ್ಯಾ, ರಬ್ಬರ್ ಬೆಳೆಗಾರರ ಸಮಿತಿ ಕಾರ್ಯದರ್ಶಿ ಎಲ್ದೋ, ತರಬೇತುದಾರ ಆಲ್ದೂರು ರಂಜಿತ್, ಎಂ.ಮಹೇಶ್ ಇದ್ದರು.