

ಕೋಲ್ಕತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ವಿಧಿಸಿದೆ. ಮತ್ತು ನಿಯಾನ್ನಲ್ಲಿ ಬರೆದ ಆಕ್ಷೇಪಾರ್ಹ ಸಂದೇಶದ ಕುರಿತು ಎರಡು ಗುಂಪುಗಳ ನಡುವೆ ಘರ್ಷಣೆ(Murshidabad Violence) ನಡೆದ ಬಳಿಕ ಭಾನುವಾರ(ನವೆಂಬರ್ 17) ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ, ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ.
ಬೆಲ್ದಂಗದಲ್ಲಿ ಶುಕ್ರವಾರ ರಾತ್ರಿ ಕಾರ್ತಿಕ ಪೂಜಾ ಮಂಟಪದಲ್ಲಿ ಸೂಚನಾ ಫಲಕದಲ್ಲಿ ಬರೆದಿದ್ದ ಸಂದೇಶವು ಹರಡುತ್ತಿದ್ದಂತೆ ಹೆಚ್ಚಿನ ಜನರು ಜಮಾಯಿಸಿದರು. ನಂತರ ಉದ್ವಿಗ್ನತೆ ಉಲ್ಬಣಗೊಂಡಿತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಎರಡೂ ಕಡೆಯ ಗುಂಪುಗಳು ಪರಸ್ಪರ ಇಟ್ಟಿಗೆಗಳನ್ನು ಎಸೆಯುವ ಜತೆಗೆ ವಿಧ್ವಂಸಕತೆ ಮತ್ತು ಬೆಂಕಿ ಹಚ್ಚುವಿಕೆಗೆ ಕಾರಣವಾಯಿತು.
ಪರಿಸ್ಥಿತಿಯನ್ನು ಅರಿತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದರು. ಹಿಂಸಾಚಾರದಲ್ಲಿ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಯಿತು. ಪೊಲೀಸ್ ವಾಹನವನ್ನು ಹಾನಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ನಾವು ಇಲ್ಲಿಯವರೆಗೆ 15ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದೇವೆ ಎಂದು ಮುರ್ಷಿದಾಬಾದ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.
ಮುರ್ಷಿದಾಬಾದ್ನಲ್ಲಿ ಶುಕ್ರವಾರ ಕೋಮುಗಲಭೆ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕಾರ್ತಿಕ ಪೂಜೆಯ ದಿನದಂದು ಮುರ್ಷಿದಾಬಾದ್ನ ಬೆಲ್ದಂಗದಲ್ಲಿ ಹಿಂಸಾಚಾರ ನಡೆದಿದ್ದು, ಹಲವಾರು ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ. ಈ ಅವಧಿಯಲ್ಲಿ ಮಮತಾ ಬ್ಯಾನರ್ಜಿ ಅವರ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಆರೋಪಿಸಿದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದನ್ನು ಅಮಿತ್ ಮಾಳವೀಯ ಕೂಡ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್)