ಐವರ ಕೊಲೆಗೆ ಕಾರಣವಾಯ್ತು ಒಂದು ಲವ್​ ಸ್ಟೋರಿ!

murder
Published on

ರಾಯಚೂರು: ಥೂ ಎಂಥ ಜನ್ರೀ ಇವರು. ತಮ್ಮ ವಿರೋಧದ ನಡುವೆಯೂ ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡ ಎಂಬ ಸಿಟ್ಟಿಗೆ ಯುವಕನ ಮನೆಯವರನ್ನೇ ಅಮಾನುಷವಾಗಿ ಕೊಂದಿದ್ದಾರೆ. ಪಾಪ, ಆ ಯುವಕನು ತನ್ನ ಹೆಂಡತಿಯೊಂದಿಗೆ ರಕ್ಷಣೆ ಕೋರಿ ಪೊಲೀಸ್​ ಠಾಣೆಯಲ್ಲಿದ್ದ. ಇದೇ ವೇಳೆ ಯುವಕನ ಮನೆ ಬಳಿಗೆ ಬಂದ ಹೆಂಡತಿ ಮನೆಯವರು ಆತನ ತಂದೆ-ತಾಯಿ, ಅತ್ತಿಗೆ, ಇಬ್ಬರು ಅಣ್ಣಂದಿರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಒಂದೇ ಕುಟುಂಬದ ಐವರನ್ನು ಅವರ ಮನೆ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದಿದೆ. ಹುಡುಗನ ತಂದೆ ಈರಪ್ಪ (60), ತಾಯಿ ಸುಮಿತ್ರಮ್ಮ (55), ಸಹೋದರರಾದ ಹನುಮೇಶ (32) ಹಾಗೂ ನಾಗರಾಜ (35) ಮತ್ತು ಅತ್ತಿಗೆ ಶ್ರೀದೇವಿ (30) ಕೊಲೆಗೀಡಾದವರು. ಹುಡುಗಿಯ ತಂದೆ ಸಣ್ಣ ಫಕೀರಪ್ಪ ಮತ್ತು ಈತನ ಸಹೋದರರಾದ ದೊಡ್ಡ ಫಕೀರಪ್ಪ ಮತ್ತು ಅಂಬಣ್ಣ ಎಂಬುವರು ಕೊಲೆ ಮಾಡಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ತೀವ್ರ ಗಾಯಗೊಂಡ ತಾಯಮ್ಮ ಮತ್ತು ರೇವತಿ ಎಂಬುವರನ್ನು ಬಳ್ಳಾರಿ ಆಸ್ಪತ್ರೆಗೆ ಕಳಿಸಲಾಗಿದೆ.

ಇದೇ ಊರಿನ ಒಂದೇ ಕೋಮಿನ ಯುವಕ ಮೌನೇಶ ಮತ್ತು ಯುವತಿ ಮಂಜುಳಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಯುವತಿ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಇವರಿಬ್ಬರು ಮನೆ ಬಿಟ್ಟು ಹೋಗಿ ಕಳೆದ ವರ್ಷ ಮದುವೆ ಆಗಿದ್ದರು. ಬಳಿಕ ಅತ್ತಿಗೆ ಶ್ರೀದೇವಿ ಮನೆಯಲ್ಲಿ ಆಶ್ರಯ ಪಡೆದಿದ್ದರು. ಜೀವಭಯದಿಂದ ಇಂದು(ಜು.11) ಪೊಲೀಸ್ ಠಾಣೆಗೆ ಬಂದ ಜೋಡಿ ರಕ್ಷಣೆ ಕೋರಿತ್ತು.

ಇದೇ ವಿಚಾರವಾಗಿ ಇಂದು ಬೆಳಗ್ಗೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಆಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಯುವಕನ ಮನೆಯವರ ಮೇಲೆ ಯುವತಿ ಕುಟುಂಬಸ್ಥರು ದೊಣ್ಣೆ ಮತ್ತು ರಾಡುಗಳಿಂದ ಮನಸೋಇಚ್ಛೆ ಹೊಡೆದು ಸ್ಥಳದಲ್ಲೇ ನಾಲ್ವರನ್ನು ಕೊಲೆ ಮಾಡಿದ್ದಾರೆ. ಯುವಕನ ತಂದೆ ಈರಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.  ನಾಲ್ವರ ಶವಗಳು ಮನೆ ಮುಂದೆ ಚೆಲ್ಲಾಪಿಲ್ಲಿಯಾಗಿ ಬಿದಿದ್ದನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net