ನಡತೆ ಶಂಕಿಸಿ ಸಂಬಂಧಿಯನ್ನೇ ಕೊಂದವರು ಅಂದರ್

Kumata Police Arrested Murder accused
Published on

ಕುಮಟಾ: ದೇವಿಮನೆ ಘಟ್ಟದ ತಗ್ಗಿನಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಅಪರಿಚಿತ ವಿವಾಹಿತ ಮಹಿಳೆಯ ಶವದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಇದೊಂದು ಕೊಲೆ ಪ್ರಕರಣವೆಂದು ತನಿಖೆಯ ಮೂಲಕ ಪತ್ತೆ ಮಾಡಿ ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿಯ ಚಿಕ್ಕಮಲ್ಲೂರು ಗ್ರಾಮದ ಯಲ್ಲಮ್ಮ (ತನುಜಾ) ಲೋಹಿತ್ ದೊಡ್ಡಮನಿ (26) ಮೃತ ಮಹಿಳೆ.

ಯಲ್ಲಮ್ಮಳ ಕುಟುಂಬದವರೇ ಆದ ಚಿಕ್ಕಮಲ್ಲೂರಿನ ಮಹೇಶ ಶಿವಪ್ಪ ದೊಡ್ಡಮನಿ (36), ಬಂಕಾಪುರದ ಕಾವ್ಯ ಅಮಿತ್ ಗೋಕಲೆ (20), ನೀಲಕ್ಕ ಚಂದ್ರಪ್ಪ ಹೊಡೆದರ್ (50), ಹಾಲಿ ಉಡುಪಿಯ ಬೈಂದೂರು ನಿವಾಸಿ ಗೌರಮ್ಮ ಮಲ್ಲೇಶ ಕರಿಮಾಳಮಠ (40), ಮುಂಡಗೋಡ ತಾಲೂಕಿನ ಇಂದೂರಿನ ಅಮಿತ್ ಅಶೋಕ ಗೋಕಲೆ (26)ಬಂಧಿತರು.

ತನುಜಾಳ ನಡತೆಯಲ್ಲಿನ ಶಂಕೆಯಿಂದ ಜೂ. 16 ರಂದು ರಾತ್ರಿ ತನುಜಾ ನಿದ್ರೆಯಲ್ಲಿರುವಾಗ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಅವಳ ಮನೆಯಲ್ಲಿಯೇ ಆರೋಪಿತರು ಕೊಲೆ ಮಾಡಿದ್ದರು.

ಬಳಿಕ ಶವವನ್ನು ತಂದು ದೇವಿಮನೆ ಘಟ್ಟದ ತಗ್ಗಿನಲ್ಲಿ ಎಸೆದಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪಿಎಸ್‌ಐ ಸಂಪತ್ ಕುಮಾರ್, ಪಿಎಸ್‌ಐ ನವೀನ್ ನಾಯ್ಕ, ಸಿಬ್ಬಂದಿ ಲೋಕೇಶ್, ದಯಾನಂದ ನಾಯ್ಕ, ಪ್ರದೀಪ, ಗುರು ನಾಯಕ್ ತನಿಖಾ ತಂಡದಲ್ಲಿದ್ದರು. ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಕುಮಟಾ ಪೊಲೀಸರ ಕಾರ್ಯ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net