ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಗ್ರಾಮದಲ್ಲಿ ತ್ಯಾಜ್ಯ ಘಟಕ ನಿರ್ಮಿಸಿ ಹಾಗೂ ರುದ್ರಭೂಮಿಯನ್ನು ಅಭಿವೃದ್ಧಿಗೊಳಿಸಿ ಎಂಬ ಆಗ್ರಹ ಮುಂಡಾಜೆ ಗ್ರಾಮಸಭೆಯಲ್ಲಿ ವ್ಯಕ್ತವಾಯಿತು.
ಮುಂಡಾಜೆ ಗ್ರಾಮಸಭೆ ಮಂಗಳವಾರ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಗಣೇಶ ಬಂಗೇರ ಅಧ್ಯಕ್ಷತೆಯಲ್ಲಿ ಜರುಗಿತು.
ಗ್ರಾಮದಲ್ಲಿ ತ್ಯಾಜ್ಯ ಘಟಕವಿಲ್ಲದ ಕಾರಣ ಇಲ್ಲಿನ ರುದ್ರಭೂಮಿಯಲ್ಲಿ ತ್ಯಾಜ್ಯ ಸಂಗ್ರಹಿಸಿ ಇಡಲಾಗುತ್ತಿದೆ. ಇದರಿಂದ ಪವಿತ್ರ ಸ್ಥಳವಾದ ರುದ್ರಭೂಮಿಯ ಪರಿಸರ ಹಾಳಾಗುತ್ತಿದೆ. ಪಂಚಾಯಿತಿಗೆ ತ್ಯಾಜ್ಯ ಸಂಗ್ರಹ ಕೆಲಸ ಕಷ್ಟವಾಗುತ್ತಿದ್ದರೆ ಇದನ್ನು ಸಂಘ-ಸಂಸ್ಥೆಗಳಿಗೆ ವಹಿಸಿ, ಗ್ರಾಮದಲ್ಲಿ ಸುಸಜ್ಜಿತ ತ್ಯಾಜ್ಯ ಟಕ ನಿರ್ಮಿಸುವ ಜತೆ ಸ್ಮಶಾನದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಬೇಕು. ರುದ್ರಭೂಮಿ, ತ್ಯಾಜ್ಯದ ವ್ಯವಸ್ಥೆಗೆ ಇತರ ಪಂಚಾಯಿತಿಗಳ ಅವಲಂಬನೆ ಕೊನೆಗೊಳಿಸಬೇಕು ಎಂದು ಗ್ರಾಮಸ್ಥ ನಾಮದೇವ ರಾವ್ ಆಗ್ರಹಿಸಿದರು. ಉತ್ತರಿಸಿದ ಗಣೇಶ ಬಂಗೇರ, ತ್ಯಾಜ್ಯ ಘಟಕಕ್ಕೆ ಸ್ಥಳ ಗುರುತಿಸಲಾಗಿದ್ದು, ರಸ್ತೆ ಸಮಸ್ಯೆಯಿಂದ ತಡವಾಗುತ್ತಿದೆ. ರುದ್ರಭೂಮಿ ಅಭಿವೃದ್ಧಿ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.
ಪಂಚಾಯಿತಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಯಾರಿಗೆ ಯಾವ ಹುದ್ದೆ ಎಂದು ತಿಳಿದು ಬರುತ್ತಿಲ್ಲ. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳವಂತೆ ಗ್ರಾಮಸ್ಥರು ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ರಸ್ತೆ ವಿಸ್ತರಣೆ ವೇಳೆ ವಿದ್ಯುತ್ ಕಂಬಗಳನ್ನು ನೆಲದ ಆಳದವರೆಗೆ ಅಳವಡಿಸದೆ ಅಪಾಯದ ಸ್ಥಿತಿ ಉಂಟಾಗುತ್ತಿರುವ ಕುರಿತು ಚರ್ಚೆ ನಡೆಯಿತು.
ಮುಂಡಾಜೆಯಿಂದ ವರ್ಗಾವಣೆಗೊಂಡ ವಿ.ಎ.ರಣಿತಾ ಅವರನ್ನು ಗೌರವಿಸಲಾಯಿತು. ಪಶು ವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಸುಮಲತಾ, ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಗಾಯತ್ರಿ ಸ್ವಾಗತಿಸಿದರು.
ಗೈರು, ಮಾಹಿತಿ ಕೊರತೆಗೆ ಆಕ್ರೋಶ
ಗ್ರಾಮದಲ್ಲಿ ಅಡಕೆ ಕೊಳೆರೋಗ ವಿಪರೀತವಾಗಿದೆ. ಕಾಡಾನೆಗಳು ಸಾಕಷ್ಟು ಕೃಷಿ ಹಾನಿ ಉಂಟು ಮಾಡುತ್ತಿವೆ. ಇದಕ್ಕೆ ಉತ್ತರ ನೀಡಬೇಕಿದ್ದ ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸಭೆಗೆ ಗೈರಾದ ಕುರಿತು, ಸರಿಯಾದ ಮಾಹಿತಿ ಇಲ್ಲದೆ ಗ್ರಾಮಸಭೆಗೆ ಇಲಾಖೆ ಅಧಿಕಾರಿಗಳು ಆಗಮಿಸುವ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಯೂಟದಲ್ಲಿ ಹುಳ!
ಮುಂಡಾಜೆ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದಲ್ಲಿ ಮಕ್ಕಳಿಗೆ ಹುಳಗಳು ಸಿಗುತ್ತಿವೆ. ಇಲ್ಲಿ ಕಲಿಕಾ ಮಟ್ಟ ತೀವ್ರ ಕುಸಿದಿದ್ದು, ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಈ ಕಾರಣದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಲಾರಂಭಿಸಿದೆ ಎಂದು ಪಾಲಕರು ತಿಳಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಿ.ಆರ್.ಪಿ. ಭರವಸೆ ನೀಡಿದರು.
ಬೇಕಿದೆ ಸಂತೆ ಮಾರುಕಟ್ಟೆ
ಮುಂಡಾಜೆಗೆ ಸಂತೆ ಮಾರುಕಟ್ಟೆಯ ಅಗತ್ಯವಿದೆ. ಜೆಜೆಎಂ ಅಸಮರ್ಪಕ ಕಾಮಗಾರಿ, ಗುಂಡ ದೈವಸ್ಥಾನದ ರಸ್ತೆ ಕುಸಿದಿರುವ ಕುರಿತು, ಸಮಾಜ ಕಲ್ಯಾಣ ಇಲಾಖೆಯ 2 ಹಾಸ್ಟೆಲ್ಗಳಲ್ಲಿ ವಾರ್ಡನ್ಗಳು ಇಲ್ಲದ ಬಗ್ಗೆ, ಬೀದಿ ದೀಪ, ಗ್ರಾಮೀಣ ರಸ್ತೆ ನಿರ್ವಹಣೆ ಬಗ್ಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರ ನೇಮಕ ಕುರಿತು ಗ್ರಾಮಸ್ಥರಾದ ದೀಕ್ಷಿತ್, ಚೆನ್ನಕೇಶವ, ನಂದೀಶ್, ವನಿತಾ, ಮೃತ್ಯುಂಜಯ ಫಡಕೆ ಮತ್ತಿತರರು ಚರ್ಚೆ ನಡೆಸಿದರು.